ಮಂಗಳೂರು: ಮಂಗಳೂರಿನ ಮಸಾಜ್ ಸೆಂಟರ್ ಮೇಲೆ ರಾಮ ಸೇನೆ ಕಾರ್ಯಕರ್ತರು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮಸೇನೆ ರಾಜ್ಯಾಧ್ಯಕ್ಷ ಪ್ರಸಾದ್ ಅತ್ತಾವರ ಅವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂಬ ಆರೋಪದಲ್ಲಿ ರಾಮ ಸೇನೆ ಕಾರ್ಯಕರ್ತರು ಮಂಗಳೂರಿನ ಬಿಜೈ ಕೆ ಎಸ್ ಆರ್ ಟಿಸಿ ನಿಲ್ದಾಣದ ಬಳಿಯ ಕಲರ್ಸ್ ಮಸಾಜ್ ಸೆಂಟರ್ ಮೇಲೆ ದಿಢೀರ್ ದಾಳಿ ನಡೆಸಿ ಅಲ್ಲಿನ ಕಿಡಕಿ ಗಾಜುಗಳನ್ನು ಪುಡಿಗೈದು, ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದರು.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಮಂಗಳೂರು ಪೊಲೀಸರು, ಪ್ರಸಾದ್ ಅತ್ತಾವರ ಅವರನ್ನು ವಶಕ್ಕೆ ಪಡೆದಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಸಾದ್ ಅತ್ತಾವರ, ಮಸಾಜ್ ಸೆಂಟರ್ ನಲ್ಲಿ ಡ್ರಗ್ಸ್ ಕೊಟ್ಟು ವೇಶ್ಯಾವಾಟಿಕೆ ನಡೆಸಲಾಗುತ್ತಿತ್ತು. 16-17 ವರ್ಷದ ಹೆಣ್ಣುಮಕ್ಕಳನ್ನು ಈ ದಂಧೆಗೆ ಬಳಸಿಕೊಳ್ಳಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ನಮ್ಮ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.