
ಮಂಗಳೂರು: ಬಾಲಿವುಡ್ ನಟಿ ಕತ್ರಿನಾ ಕೈಫ್, ಪತಿ ವಿಕ್ಕಿ ಕೌಶಲ್, ಕ್ರಿಕೆಟಿಗ ಕೆ.ಎಲ್.ರಾಹುಲ್, ಪತ್ನಿ ಆಥಿಯಾ ಶೆಟ್ಟಿ ಸೇರಿದಂತೆ ಬಾಲಿವುಡ್ ನಟ-ನಟಿಯರು, ಕ್ರಿಕೆಟ್ ಜೋಡಿಗಳು ಮಂಗಳೂರಿನ ಕೊರಗಜ್ಜನ ಸನ್ನಿಧಾನಕ್ಕೆ ಆಗಮಿಸಿ, ಕೋಲದಲ್ಲಿ ಭಾಗವಹಿಸುವ ಮೂಲಕ ದೇವರ ಕೃಪೆಗೆ ಪಾತ್ರರಾಗಿದ್ದು ವಿಶೇಷ.
ಮಂಗಳೂರು ಹೊರವಲಯದ ಕಾರಣಿಕ ಕ್ಷೇತ್ರ ಕುತ್ತಾರು ಕೊರಗಜ್ಜನ ಕ್ಷೇತ್ರದಲ್ಲಿ ಭಾನುವಾರ ರತರಿ ನಡೆದ ಹರಕೆಯ ಕೋಲದಲ್ಲಿ ಬಾಲಿವುಡ್ ನಟ-ನಟಿಯರು, ಕ್ರಿಕೆಟ್ ಆಟಗಾರರು ಪಾಲ್ಗೊಂಡಿದ್ದರು. ಎರಡು ತಿಂಗಳ ಹಿಂದೆಯೇ ಕುತ್ತಾರು ಕ್ಷೇತ್ರದ ಕೊರಗಜ್ಜನ ಕೋಲದಲ್ಲಿ ಭಾಗವಹಿಸುವ ಭಕ್ತರ ಪಟ್ಟಿಯಲ್ಲಿ ನಟ-ನಟಿ,ಕ್ರಿಕೆಟ್ ನಾಯಕರ ಹೆಸರು ಪ್ರಕಟವಾಗಿತ್ತು.
ಇದೀಗ ಕೊರಗಜ್ಜನ ಕೋಲದಲ್ಲಿ ಭಾಗವಹಿಸಿ ಹರಕೆ ತೀರಿಸಿದ್ದಾರೆ. ನಟಿ ಕತ್ರಿನಾ ಕೈಫ್, ಪತಿ ವಿಕ್ಕಿ ಕೌಶಲ್, ನಟ ಅಹನ್ ಶೆಟ್ಟಿ, ಕ್ರಿಕೆಟಿಗ ಕೆ.ಎಲ್.ರಾಹುಲ್, ಪತ್ನಿ ಆಥಿಯಾ ಶೆಟ್ಟಿ, ಮ್ಯಾಟ್ರಿಕ್ ಎಂಟ್ರಟೈನ್ ಮೆಂಟ್ ನ ರೇಷ್ಮಾ ಶೆಟ್ಟಿ ಹಾಗೂ ಎಂ.ವಿ.ಕಾಮತ್ ಸೇರಿದಂತೆ ಹಲವರು ಕ್ಷೇತ್ರದ ಕೋಲದಲ್ಲಿ ಪಾಲ್ಗೊಂಡಿದ್ದರು.
ಕ್ಷೇತ್ರದ ಸಂಪ್ರದಾಯದಂತೆ ಸಂಜೆ 7 ಗಂಟೆ ಬಳಿಕ ಮಹಿಳೆಯರು ಕೊರಗಜ್ಜನ ಕಟ್ಟೆಯ ಆವರಣದಲ್ಲಿ ಇರುವಂತಿಲ್ಲ. ಈ ಹಿನ್ನೆಲೆಯಲ್ಲಿ ಕತ್ರಿನಾ, ಆಥಿಯಾ, ರೇಶ್ಮಾ ಸೇರಿದಂತೆ ಹಲವು ಮಹಿಳೆಯರು ಕೋಲ ನಡೆಯುವ ಸಂದರ್ಭದಲ್ಲಿ ಹೊರಗುಳಿದು ಕಚೇರಿಯಲ್ಲಿ ಕುಳಿತಿದ್ದರು. ಕೆ.ಎಲ್.ರಾಹುಲ್, ಅಹಾನ್ ಮೊದಲಾದವರು ಕೋಲದಲ್ಲಿ ಭಾಗವಹಿಸಿದ್ದರು.