ಮಂಗಳೂರು: ಮಂಗಳೂರು ಹೊರ ವಲಯದ ಅಸೈಗೋಳಿ ಬಳಿ ನಟೋರಿಯಸ್ ರೌಡಿಶೀಟರ್ ಮುಕ್ತಾರ್ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಪೊಲೀಸರ ಮೇಲೆ ದಾಳಿ ನಡೆಸಿ ಪರಾರಿಗೆ ಯತ್ನಿಸಿದ ವೇಳೆ ಫೈರಿಂಗ್ ಮಾಡಲಾಗಿದೆ.
ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ್ದು, ಒಂದು ಗುಂಡು ಕಾಲಿಗೆ ತಗಲಿದೆ. 15 ಕ್ಕೂ ಹೆಚ್ಚು ಪ್ರಕರಣಗಳ ಆರೋಪಿಯಾಗಿರುವ ಮುಕ್ತಾರ್ ಮೇಲೆ ಫೈರಿಂಗ್ ಮಾಡಲಾಗಿದೆ. ಆರು ಪ್ರಕರಣಗಳಲ್ಲಿ ಐದು ವರ್ಷಗಳಿಂದ ಮುಕ್ತಾರ್ ತಪ್ಪಿಸಿಕೊಂಡಿದ್ದ. 2017 ರಿಂದ ಪೊಲೀಸರ ಕೈಗೆ ಸಿಗದೇ ತಪ್ಪಿಸಿಕೊಂಡಿದ್ದ. ಪ್ರಕರಣವೊಂದರಲ್ಲಿ ಬಂಧಿಸಿ ಮಹಜರು ಮಾಡಲು ಕರೆದುಕೊಂಡು ಹೋದಾಗ ಘಟನೆ ನಡೆದಿದೆ.
ಗುಂಡೇಟು ತಗುಲಿದ ಮುಕ್ತಾರ್ ನನ್ನು ವಶಕ್ಕೆ ಪಡೆದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಗಾಯಗೊಂಡ ಪೊಲೀಸ್ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.