ಮಂಗಳೂರು: ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಯುವಕ, ಯುವತಿಯನ್ನು ಅಡ್ಡಗಟ್ಟಿದ ತಂಡವೊಂದು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪದವಿ ವ್ಯಾಸಂಗ ಮುಗಿಸಿದ ಯುವಕ ಮತ್ತು ಯುವತಿ ಸ್ನೇಹಿತರಾಗಿದ್ದು ಬೆಂಗಳೂರಿಗೆ ಕೆಲಸದ ನಿಮಿತ್ತ ಖಾಸಗಿ ಬಸ್ ನಲ್ಲಿ ಗುರುವಾರ ರಾತ್ರಿ ಪ್ರಯಾಣ ಬೆಳೆಸಿದ್ದರು. ಸಂಘಟನೆಯೊಂದರ ಕಾರ್ಯಕರ್ತರು ಈ ಬಗ್ಗೆ ಮಾಹಿತಿ ಪಡೆದು ಮಂಗಳೂರಿನ ಪಂಪ್ ವೆಲ್ ಸಮೀಪ ಬಸ್ ನಿಲ್ಲಿಸಿದ್ದು, ಬಸ್ ನಿಂದ ಯುವಕ, ಯುವತಿ ಕೆಳಗಿಳಿಸಿ ಹಲ್ಲೆ ಮಾಡಿದ್ದಾರೆ. ಯುವಕನಿಗೆ ಚಾಕುವಿನಿಂದ ಇರಿಯಲಾಗಿದ್ದು, ಗಾಯಗೊಂಡ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿಯನ್ನು ವಶಕ್ಕೆ ಪಡೆಯಲಾಗಿದ್ದು, ಕಂಕನಾಡಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.