ಮಂಗಳೂರು: ಬಂಟ್ವಾಳದ ಬಿ.ಸಿ.ರೋಡ್ ನಲ್ಲಿ ಪರಿಸ್ಥಿತಿ ಶಾಂತಗೊಳ್ಳುತ್ತಿದ್ದಂತೆ ಮುಸ್ಲಿಂ ಸಮುದಾಯಗಳ ಬೈಕ್ ರ್ಯಾಲಿಗೆ ಪೊಲೀಸರು ಅನುಮತಿ ನೀಡಿ ಮತ್ತೆ ಎಡವಟ್ಟು ಮಾಡಿಕೊಂಡಿದ್ದಾರೆ. ಇದರಿಂದ ಹಿಂದೂ ಸಂಘಟನೆ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದು, ಬಿ.ಸಿ.ರೋಡ್ ನಲ್ಲಿ ಮತ್ತೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಬೈಕ್ ರ್ಯಾಲಿ ವೇಳೆ ಮುಸ್ಲಿಂ ಯುವಕರು ಹಿಂದೂ ಕಾರ್ಯಕರ್ತರನ್ನು ಕೆರಳಿಸಿದ್ದಾರೆ ಎಂಬ ಆರೋಪಗಳು ಕೇLiಬಂದಿವೆ. ಇದರಿಂದ ಹಿಂದೂ ಕಾರ್ಯಕರ್ತರು ಮತ್ತೆ ಸಿಡಿದೆದ್ದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಮುಸ್ಲಿಂ ಹಾಗೂ ಹಿಂದೂ ಮುಖಂಡರ ಪ್ರಚೋದನಕಾರಿ ಹೇಳಿಕೆ ಹಾಗೂ ಬಿ.ಸಿ.ರೋಡ್ ಚಲೋ ಪ್ರತಿಭಟನೆಯಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಬೆಳಿಗ್ಗೆಯಿಂದ ಹರಸಾಹಸಪಟ್ಟ ಪೊಲೀಸರು ಮಧ್ಯಾಹ್ನದ ವೇಳೆಗೆ ಪರಿಸ್ಥಿತಿ ಶಾಂತಗೊಳಿಸಿದ್ದರು. ಆದರೆ ಈದ್ ಮಿಲಾದ್ ಹಿನ್ನೆಲೆಯಲ್ಲಿ ಪೊಲೀಸರು ಮುಸ್ಲಿಂ ಯುವಕರ ಬೈಕ್ ರ್ಯಾಲಿಗೆ ಅನುಮತಿ ಕೊಟ್ಟಿದ್ದಾರೆ. ಇದರಿಂದಾಗಿ ಮತ್ತೆ ಗೊಂದಲ-ಗಲಾಟೆ ವಾತಾವರಣ ನಿರ್ಮಣವಾಗಿದೆ.
ಮುಸ್ಲಿಂ ಬೈಕ್ ರ್ಯಾಲಿಗೆ ಅನುಮತಿ ನೀಡಿರುವ ಪೊಲೀಸ್ ಕ್ರಮವನ್ನು ಖಂಡಿಸಿ ಹಿಂದೂ ಸಂಘಟನೆ ಕಾರ್ಯಕರ್ತರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ. ನಮಗೆ ಮೆರವಣಿಗೆಗೆ ಅನುಮತಿ ನೀಡಿಲ್ಲ. ಈಗ ಮುಸ್ಲಿಂರಿಗೆ ಬೈಕ್ ರ್ಯಾಲಿಗೆ ಅವಕಾಶ ಕೊಟ್ಟಿದ್ದೀರಿ ಇಂತಹ ನಡೆ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಜೆಯವರೆಗೂ ರಸ್ತೆಯಲ್ಲಿಯೇ ಧರಣಿ ನಡೆಸುವುದಾಗಿ ಪ್ರತಿಭಟನೆ ಆರಂಭಿಸಿದ್ದಾರೆ.