ಮಂಗಳೂರು: ಸಮುದ್ರದ ಅಲೆಗಳಿಗೆಸಿಲುಕಿ ಕೊಚ್ಚಿ ಹೊಗುತ್ತಿದ್ದ ಅಣ್ಣನ ಮಗಳನ್ನು ರಕ್ಷಿಸಿ, ಬೃಹತ್ ಅಲೆಗಳ ಹೊಡೆತಕ್ಕೆ ಸಿಲುಕಿ ಚಿಕ್ಕಪ್ಪ ನೀರು ಪಾಲಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸೋಮೇಶ್ವರದ ಉಚ್ಚಿಲದ ಪೆರಿಬೈಲು ಎಂಬಲ್ಲಿ ನಡೆದಿದೆ.
ಕೆ.ಎಂ.ಸಜ್ಜದ್ ಅಲಿ (45) ಮೃತರು. ಬೆಂಗಳೂರಿನ ಶಿವಾಜಿ ನಗರದ ನಿವಾಸಿ. ಸಂಬಂಧಿಕರ ಮದುವೆಗೆಂದು ಮಂಗಳೂರಿನ ಅಡ್ಯಾರ್ ಗಾರ್ಡನ್ ಗೆ ಆಗಮಿಸಿದ್ದ ವೇಳೆ ಈ ದುರಂತ ಸಂಭವಿಸಿದೆ. ಸಜ್ಜದ್ ಅಲಿ ಕುಟುಂಬದವರ ಜೊತೆಗೂಡಿ ಸೋಮೇಶ್ವರ ಪೆರಿಬೈಲು ಕಡಲ ತೀರಕ್ಕೆ ಹೋಗಿದ್ದರು. ಬೀಚ್ ನಲ್ಲಿ ಆಟವಾಡುತ್ತಿದ್ದ ವೇಳೆ ಸಹೋದನ ಪುತ್ರಿ ಆಸಿಯಾ ನೀರು ಪಾಲಾಗುತ್ತಿದ್ದಳು. ಅಲೆಗಳಿಗೆ ಸಿಲುಕಿ ಕೊಚ್ಚಿ ಹೋಗುತ್ತಿದ್ದವಳನ್ನು ಸಜ್ಜದ್ ಅಲಿ ತಕ್ಷಣ ಸಮುದ್ರಕ್ಕೆ ಧುಮುಕಿ ಆಸಿಯಾಳನ್ನು ರಕ್ಷಿಸಿ ದಡಕ್ಕೆ ಎಳೆದು ತಂದಿದ್ದಾರೆ. ಇದೇ ವೇಳೆ ದೈತ್ಯಾಕಾರದ ಅಲೆಯೊಂದು ಅಪ್ಪಳಿಸಿದ್ದು, ಬೃಹತ್ ಅಲೆ ಸಜ್ಜದವರನ್ನು ಸಮುದ್ರದೊಳಗೆ ಎಳೆದೊಯ್ದಿದೆ. ಇದರ ಬೆನ್ನಲ್ಲೇ ಮತ್ತೊಂದು ಬೃಹತ್ ಅಲೆ ಸಜ್ಜದವರನ್ನು ವಾಪಾಸ್ ಸಮುದ್ರತೀರಕ್ಕೆ ತಳ್ಳಿದೆ. ಅಲೆಯ ಹೊಡೆದತಕ್ಕೆ ಸಜ್ಜದ್ ಸಮುದ್ರ ತೀರಕ್ಕೆ ಬಂದು ಬಿದ್ದಿದ್ದಾರೆ.
ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ತಕ್ಷಣ ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಷ್ಟರಲ್ಲೇ ಅವರು ಸಾವನ್ನಪ್ಪಿದ್ದರು.