
ಮಂಗಳೂರು: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ-ಮುಡಾದಲ್ಲಿ ಭ್ರಷ್ಟಚಹಾರ ಆರೋಪ ಕೇಳಿಬಂದಿದೆ. ದಲ್ಲಾಳಿಗಳ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಕಮಿಷನರ್ ಗೆ ವಾಮಾಚಾರ ಬೆದರಿಕೆ ಒಡ್ಡಿರುವ ಘಟನೆ ನಡೆದಿದೆ.
ಬ್ರೋಕರ್ ಗಳ ಬೆದರಿಕೆ, ಅಟ್ಟಹಾಸಕ್ಕೆ ಕಂಗಾಲಾಗಿರುವ ಮುಡಾ ಆಯುಕ್ತೆ ನೂರ್ ಝಹರಾ ಖಾನಂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮುಡಾ ಕಚೇರಿಗೆ ಬ್ರೋಕರ್ ಗಳಿಗೆ ನಿರ್ಬಂಧ ಹೇರಿದ್ದಕ್ಕೆ ಕಮಿಷನರ್ ಮೇಲೆ ವಾಮಾಚಾರ ಮಾಡುವುದಾಅಗಿ ಬೆದರಿಕೆ ಹಾಕಿದ್ದಾರಂತೆ. ಈ ಬಗ್ಗೆ ಕಮಿಷನರ್ ಮಂಗಳೂರು ಊರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಇಬ್ಬರು ದಲ್ಲಾಳಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಬ್ರೋಕರ್ ವಹಾಬ್ (45) ಹಾಗೂ ಅಸಿಸ್ಟೆಂಟ್ ಬ್ರೋಕರ್ ಸಾಬಿತ್ (25) ವಿರುದ್ಧ ಪ್ರಕರಣ ದಾಖಲಾಗಿದೆ. ಬ್ರೋಕರ್ ಗಳೆಲ್ಲಾ ಸೇರಿ ವಾಟ್ಸಪ್ ಗ್ರೂಪ್ ರಚಿಸಿ ಅದರಲ್ಲಿ ಜೀವ ಬೆದರಿಕೆ ಹಾಕಿದ್ದಾರೆ. ಅಲ್ಲದೇ ಅವಮಾನಕರ ಸಂದೇಶ ರವಾನಿಸಿದ್ದಾರೆ ಎಂದು ಕಮಿಷನರ್ ನೂರ್ ಝಹರಾ ಖಾನಂ ದೂರು ನೀಡಿದ್ದಾರೆ. ಫೋನ್ ಕರೆ ಮಾಡಿಯೂ ಬೆದರಿಕೆ ಹಾಕುತ್ತಿರುವುದಾಗಿ ಕಮಿಷನರ್ ಉಲ್ಲೇಖಿಸಿದ್ದಾರೆ.
ಕೆಲ ದಿನಗಳ ಹಿಂದೆ ಮುಡಾ ಕಚೇರಿಯಲ್ಲಿ ಬ್ರೋಕರ್ ಓರ್ವ ಅಧಿಕಾರಿಯೊಬ್ಬರ ಚೇಂಬರ್ ನಲ್ಲಿ ಕಡತಗಳ ತಿದ್ದುಪಡಿ ಮಾಡಿದ್ದ. ಈ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆ ಬೆನ್ನಲ್ಲೇ ಕಮಿಷನರ್ ಮುಡಾ ಕಚೇರಿಗೆ ಬ್ರೋಕರ್ ಗಳು ಎಂಟ್ರಿಯಾಗದಂತೆ ಕಠಿಣ ಕ್ರಮ ಕೈಗೊಂಡಿದ್ದರು. ಇದರ ಬೆನ್ನಲ್ಲೇ ಕಮಿಷನರ್ ಗೆ ಬ್ರೋಕರ್ ಗಳು ಬೆದರಿಕೆ ಹಾಕುತ್ತಿದ್ದಾರೆ ಎನ್ನಲಾಗಿದೆ.