ಮಂಡ್ಯ: ರಾಜ್ಯದಲ್ಲಿ ಬರಗಾಲದ ಛಾಯೆ ಆವರಿಸಿದ್ದು, ಮಳೆರಾಯನಿಗಾಗಿ ಜನರು ದೇವರ ಮೊರೆ ಹೋಗಿದ್ದಾರೆ. ವಿವಿಧ ರೀತಿಯ ಪೂಜೆ, ಪುನಸ್ಕಾರಗಳಲ್ಲಿ ತೊಡಗಿದ್ದಾರೆ. ಮಳೆಗಾಗಿ ದೇವರಿಗೆ ಪೂಜೆ, ಹೋಮ-ಹವನ, ಪರ್ಜನ್ಯ ಮಾಡುವುದನ್ನು ನೋಡಿದ್ದೇವೆ ಆದರೆ ಮಂಡ್ಯದ ಗ್ರಾಮವೊಂದರಲ್ಲಿ ವರುಣನ ಕೃಪೆಗಾಗಿ ಪುಟ್ಟ ಮಕ್ಕಳ ಮದುವೆ ಮಾಡಿರುವ ಘಟನೆ ನಡೆದಿದೆ.
ಮಂಡ್ಯ ಜಿಲ್ಲೆಯ ಬೆಟ್ಟದ ಮಲ್ಲೇನಹಳ್ಳಿಯಲ್ಲಿ ಮಳೆರಾಯನಿಗಾಗಿ ಗ್ರಾಮಸ್ಥರು ಪುಟ್ಟ ಮಕ್ಕಳಿಗೆ ಮಳೆರಾಯನ ದಂಪತಿ ವೇಷ ಹಾಕಿ ತಿಂಗಳ ಮಾವನ ಮದುವೆ ಮಾಡಿದ್ದಾರೆ. ಕಳೆದ 15 ದಿನಗಳಿಂದ ದೇವಸ್ಥಾನದಲ್ಲಿ ಸಂಪ್ರದಾಯದಂತೆ ಪೂಜೆ ಮಾಡಿ, ಕೊನೇ ದಿನ ಮಕ್ಕಳ ಮದುವೆ ಮಾಡಲಾಗಿದೆ.
ಇದು ಬೆಟ್ಟದ ಮಲ್ಲೇನಹಳ್ಳಿಯಲ್ಲಿ ಮಳೆಗಾಗಿ ಪೂರ್ವಿಕರು ನಡೆಸಿಕೊಂಡು ಬಂದಿರುವ ಪದ್ಧತಿಯಂತೆ. 15 ದಿನಗಳಿಂದ ಗ್ರಾಮಸ್ಥರು ಉಚ್ಚಮ್ಮ ದೇವಾಲಯದ ಆವರಣದಲ್ಲಿ ಮಳೆಗಾಗಿ ಪ್ರಾರ್ಥನೆ ಮಾಡಿ ಪ್ರತಿ ದಿನ ವಿಶೇಷ ಪೂಜೆ ಸಲ್ಲಿಸಿ, ಮಳೆರಾಯನಿಗಾಗಿ ಸೋಬಾನ ಪದ ಹೇಳಿ ನಾನಾ ವಿಧದಲ್ಲಿ ಪೂಜೆ ಮಾಡಿ ಅರಳಿ ಕಟ್ಟೆಗೆ ಸಮರ್ಪಿಸುತ್ತಾರೆ.
ಕೊನೇ ದಿನ ಪುಟ್ಟ ಮಕ್ಕಳಿಗೆ ಮಳೆರಾಯನ ದಂಪತಿ ವೇಷ ಹಾಕಿ, ಮದುವೆ ಮಾಡಿ ಸೋಬಾನ ಪದ ಹಾಡಿ, ವರುಣನ ಕೃಪೆಗಾಗಿ ಪ್ರಾರ್ಥಿಸಿದ್ದಾರೆ. ಬಳಿಕ ಎಲ್ಲರಿಗೂ ಸಿಹಿ ಹಾಗೂ ಎಲೆ ಅಡಿಕೆ ಹಂಚಿದ್ದಾರೆ.
ಈ ಬಾರಿ ಬರಗಾಲ ಬಂದಿರುವುದರಿಂದ ಈ ರೀತಿ ಪೂಜೆ ಸಲ್ಲಿಸುವುದರಿಂದ ಮಳೆಯಾಗಲಿದೆ ಎಂಬುದು ಗ್ರಾಮಸ್ಥರ ನಂಬಿಕೆಯಂತೆ.
ಮಂಡ್ಯ,ಮಳೆ,ಮಕ್ಕಳ ಮದುವೆ, ಬೆಟ್ಟದ ಮಲ್ಲೇನಹಳ್ಳಿ,