ಬೆಂಗಳೂರು: ಮಂಡ್ಯದಲ್ಲಿ ಫೆಬ್ರವರಿ 11 ರಿಂದ 13 ರವರೆಗೆ ನಿಗದಿಯಾಗಿದ್ದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬರದ ಕಾರಣದಿಂದ ಮುಂದೂಡಲು ತೀರ್ಮಾನಿಸಲಾಗಿದೆ.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಹೇಶ್ ಜೋಶಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಫೆಬ್ರವರಿಯಲ್ಲಿ ಸಾಹಿತ್ಯ ಸಮ್ಮೇಳನ ನಡೆಸಲು ಚರ್ಚೆ ನಡೆದಿತ್ತು. ಮಂಡ್ಯದ ಹಲವು ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ. ಹೀಗಾಗಿ, ಸಮ್ಮೇಳನ ಮುಂದೂಡಿಕೆ ಅನಿವಾರ್ಯವಾಗಿದೆ. 2024ರ ಅಂತ್ಯದ ವೇಳೆಗೆ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
30 ವರ್ಷಗಳ ಹಿಂದೆ ಮಂಡ್ಯದಲ್ಲಿ ಫೆಬ್ರವರಿ ತಿಂಗಳ ಎರಡನೇ ವಾರ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲಾಗಿತ್ತು. ಇದನ್ನು ದಾಖಲೆಯಾಗಿಸುವ ನಿಟ್ಟಿನಲ್ಲಿ ಅದೇ ತಿಂಗಳು ಅದೇ ದಿನಾಂಕದಂದು 2024ನೇ ವರ್ಷದ ಸಾಹಿತ್ಯ ಸಮ್ಮೇಳನ ನಡೆಸಲು ತೀರ್ಮಾನಿಸಲಾಗಿತ್ತು. 1994ರಲ್ಲಿ 63ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಫೆಬ್ರವರಿ 11 ರಿಂದ 13 ರವರೆಗೆ ಮಂಡ್ಯದಲ್ಲಿ ನಡೆದಿತ್ತು.