
ಮಂಡ್ಯ: ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರತಿನಿಧಿ ನೋಂದಣಿಗೆ 600 ರೂ. ಶುಲ್ಕ ನಿಗದಿ ಮಾಡಲಾಗಿದೆ.
ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಸಾಹಿತ್ಯ ಸಮ್ಮೇಳನ ಪ್ರತಿನಿಧಿಗಳ ಆನ್ಲೈನ್ ನೋಂದಣಿಗೆ ಶನಿವಾರ ಚಾಲನೆ ನೀಡಿ ಮಾಹಿತಿ ನೀಡಿದ್ದು, ಈ ಬಾರಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರತಿನಿಧಿಯಾಗಿ ನೋಂದಣಿಯಾಗಿ ಭಾಗವಹಿಸಲು 600 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ವೆಬ್ಸೈಟ್ ನಲ್ಲಿ ನೋಂದಣಿ ಮಾಡಿಕೊಳ್ಳಲು ಇಂದಿನಿಂದ 20 ದಿನ ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ನೋಂದಣಿಯಾಗುವವರಿಗೆ ವಸತಿಯ ಸ್ಥಳ, ವಿಳಾಸ, ನೋಡಲ್ ಅಧಿಕಾರಿಗಳ ಮೊಬೈಲ್ ಸಂಖ್ಯೆ ಹಾಗೂ ಆನ್ಲೈನ್ ನಲ್ಲಿ ಫೋಟೋ ಸಹಿತ ಗುರುತಿನ ಚೀಟಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಕುಮಾರ್ ತಿಳಿಸಿದ್ದಾರೆ.