ಮಂಡ್ಯ: ವಾರದ ಹಿಂದೆ ನಡೆದಿದ್ದ ಮಹಿಳೆಯ ಕೊಲೆ ಪ್ರಕರಣ ಸ್ಫೋಟಕ ತಿರುವು ಪಡೆದುಕೊಂಡಿದ್ದು, ಪತಿಯೇ ಪತ್ನಿಯನ್ನು ಹತ್ಯೆಗೈದು ವಿಷ ಸೇವಿಸಿ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದ ಎಂಬ ರಹಸ್ಯ ಬಯಲಾಗಿದೆ.
23 ವರ್ಷದ ಸಂಧ್ಯಾ ಎಂಬ ಮಹಿಳೆಯನ್ನು ಪತಿಯೇ ಹತ್ಯೆಗೈದಿದ್ದ. ಒಂದುವರೆ ವರ್ಷದ ಹಿಂದೆ ಮದ್ದೂರು ತಾಲೂಕಿನ ಹಾಗಲಹಳ್ಳಿ ಗ್ರಾಮದ ಷಡಕ್ಷರಿ ಎಂಬಾತನನ್ನು ಸಂಧ್ಯಾ ಮದುವೆಯಾಗಿದ್ದರು. ಆದರೆ ದಾಂಪತ್ಯದಲ್ಲಿ ಬಿರುಕು ಹಿನ್ನೆಲೆಯಲ್ಲಿ ಪತಿ ಪತ್ನಿ ದೂರವಾಗಿದ್ದರು.
ಸಂಧ್ಯಾ ತನ್ನ ತವರು ಮನೆಗೆ ಬಂದು ಕಂಪ್ಯೂಟರ್ ತರಬೇತಿ ಪಡೆಯುತ್ತಿದ್ದರು. ಆದರೆ ನ.16ರಂದು ಕಂಪ್ಯೂಟರ್ ಕ್ಲಾಸ್ ಗೆ ಹೋಗಿದ್ದ ಸಂಧ್ಯಾ ನಿಗೂಢವಾಗಿ ನಾಪತ್ತೆಯಾಗಿದ್ದರು. ಈ ಹಿನ್ನೆಲೆಯಲ್ಲಿ ತಂದೆ ಬೆಳಕವಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇದೇ ವೇಳೆ ಸಂಧ್ಯಾ ಪತಿ ವಿಷ ಸೇವಿಸಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ. ಆಸ್ಪತ್ರೆಯಿಂದ ಬಿಡುಗಡೆಯಾಗುವವರೆಗೂ ಕಾದಿದ್ದ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ತೀವ್ರ ವಿಚಾರಣೆ ಬಳಿಕ ತಪ್ಪೊಪ್ಪಿಕೊಂಡ ಷಡಕ್ಷರಿ, ಕಂಪ್ಯೂಟರ್ ಕ್ಲಾಸ್ ಮುಗಿಸಿ ಮನೆಗೆ ತೆರಳುತ್ತಿದ್ದ ಪತ್ನಿಯನ್ನು ಬೆಟ್ಟಕ್ಕೆ ಕರೆದೊಯ್ದು ಕೊಲೆ ಮಾಡಿದ್ದಾಗಿ ಹಾಗೂ ಬಳಿಕ ಮೃತದೇಹವನ್ನು ನಾಲೆಗೆ ಬಿಸಾಕಿದ್ದಾಗಿ ಬಾಯ್ಬಿಟ್ಟಿದ್ದಾನೆ. ಪ್ರಕರಣದಿಂದ ತಪ್ಪಿಸಿಕೊಳ್ಳಲು ತಾನೇ ವಿಷ ಕುಡಿದು ಆಸ್ಪತ್ರೆಗೆ ದಾಖಲಾಗಿದ್ದಾಗಿ ಹೇಳಿದ್ದಾನೆ.