ಮಂಡ್ಯ: ಮಂಡ್ಯ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಇದೇ ವೇಳೆ ನಗರಸಭೆ ಕಚೇರಿ ಮುಂಭಾಗ ಹೈಡ್ರಾಮಾ ನಡೆದಿದೆ.
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಎದುರಲ್ಲೇ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು, ಸದಸ್ಯರು ಗಲಾಟೆ ಮಾಡಿಕೊಂಡಿದ್ದು, ಕೈಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ತಲುಪಿದ್ದಾರೆ. ಪೊಲೀಸರು ಮಧ್ಯಪ್ರವೇಶ ಮಾಡಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.
ಮಂಡ್ಯ ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ನಗರಸಭೆ ಕಚೇರಿ ಒಳಗೆ ವಾಹನ ಬಿಡದ ವಿಚಾರವಾಗಿ ಎರಡು ಪಕ್ಷಗಳ ಸದಸ್ಯರ ನಡುವೆ ವಾಗ್ವಾದ ಆರಂಭವಾಗಿ, ಗಲಾಟೆ ತಾರಕಕ್ಕೇರಿದೆ. ಜೆಡಿಎಸ್ ಸದಸ್ಯರು ಬಸ್ ನಲ್ಲಿ ಆಗಮಿಸಿದ್ದು, ನಗರಸಭೆ ಆವರಣದ ಒಳಗೆ ಬಸ್ ಪ್ರವೇಶಕ್ಕೆ ಬಿಡದೇ ಕಾಂಗ್ರೆಸ್ ಶಾಸಕ ಗಣಿಗ ರವಿ ನೇತೃತ್ವದಲ್ಲಿ ತಡೆಯಲಾಗಿದೆ. ಈ ವೇಳೆ ಕೇಂದ್ರ ಸಚಿವ ಹೆಚ್.ಡಿ.ಕುಮರಸ್ವಾಮಿ ವಾಹನವನ್ನು ಮಾತ್ರ ಒಲಗೆ ಬಿಡಲಾಗಿದೆ.
ಜೆಡಿಎಸ್ ಸದಸ್ಯರ ವಾಹನವನ್ನು ನಗರಸಭೆ ಆವರಣಕ್ಕೆ ಬಿಡುತ್ತಿಲ್ಲ ಎಂದು ಜೆಡಿಎಸ್ ಸದಸ್ಯರು ಕ್ಯಾತೆ ಆರಂಭಿಸಿದ್ದಾರೆ. ಈ ವೇಳೆ ಜೆಡಿಎಸ್ ಸದಸ್ಯರು ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು.