
ಮಂಡ್ಯ: ಮಳೆ ಅಬ್ಬರಕ್ಕೆ ಕೆರೆಕೋಡಿ ಬಿದ್ದ ಪರಿಣಾಮ ದುರಂತವೊಂದು ಸಂಭವಿಸಿದ್ದು, ಬೈಕ್ ಸವಾರನೊಬ್ಬ ನೀರಿನಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಅಣೆಚನ್ನಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ರಾಮಚಂದ್ರೇಗೌಡ (60) ಮೃತ ದುರ್ದೈವಿ. ಕಬಂದಹಳ್ಳಿ ಗ್ರಾಮದ ನಿವಾಸಿಯಾಗಿರುವ ರಾಮಚಂದ್ರೆಗೌಡ ಬಿಂಡಿಗನವಿಲೆ ಗ್ರಾಮಕ್ಕೆ ಬೈಕ್ ನಲ್ಲಿ ತೆರಳುತ್ತಿದ್ದರು. ಕೆರೆಕೋಡಿ ಬಿದ್ದ ಪರಿಣಾಮ ನೀರು ರಸ್ತೆಯ ಮೇಲೆ ರಭಸವಾಗಿ ಹರಿಯುತ್ತಿತ್ತು. ರಸ್ತೆ ದಾಟುತ್ತಿದ್ದ ಬೈಕ್ ಸವಾರ ನೀರಿನ ರಭಸಕ್ಕೆ ಬೈಕ್ ಸಮೇತ ಕೊಚ್ಚಿ ಹೋಗಿದ್ದಾರೆ. ಹೇಗೋ ಬಚಾವ್ ಆಗಿ ಹಳ್ಳದಲ್ಲಿದ್ದ ಮರವೊಂದನ್ನು ಏರಿ ಕುಳಿತಿದ್ದರು.
ಮರದಲ್ಲಿ ಕುಳಿತಿದ್ದ ರಾಮಚಂದ್ರೇಗೌಡ ಅವರ ರಕ್ಷಣೆಗೆಂದು ಸ್ಥಳೀಯರು ಹಗ್ಗವನ್ನು ಕೊಟ್ಟು ರಕ್ಷಿಸಲು ಮುಂದಾಗಿದ್ದಾರೆ. ಹಗ್ಗ ಹಿಡಿಯಲು ಆಗದೇ ವ್ಯಕ್ತಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾರೆ. ಬಿಂಡಿಗನವಿಲೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.