ಬೆಂಗಳೂರು: ಲೋಕಸಭೆ ಚುನಾವಣೆಗೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಇಂದು ಅಭ್ಯರ್ಥಿಗಳ ಹೆಸರು ಪ್ರಕಟಿಸುವ ಸಾಧ್ಯತೆ ಇದೆ.
ಹಾಸನ, ಮಂಡ್ಯ, ಕೋಲಾರ ಕ್ಷೇತ್ರಗಳಿಗೆ ಜೆಡಿಎಸ್ ಅಭ್ಯರ್ಥಿಗಳನ್ನು ಪ್ರಕಟಿಸಲಿದ್ದು, ಮಂಡ್ಯ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಹೃದಯ ಶಸ್ತ್ರಚಿಕಿತ್ಸೆ ಬಳಿಕ ಬೆಂಗಳೂರಿಗೆ ವಾಪಸ್ ಆದ ಕುಮಾರಸ್ವಾಮಿ ಅವರನ್ನು ಭೇಟಿಯಾಗಲು ಬಂದಿದ್ದ ಅಪಾರ ಸಂಖ್ಯೆಯ ಅಭಿಮಾನಿಗಳು, ಮಂಡ್ಯ ಜಿಲ್ಲೆಯ ಕಾರ್ಯಕರ್ತರು ಮಂಡ್ಯದಿಂದಲೇ ಸ್ಪರ್ಧಿಸಬೇಕೆಂದು ಒತ್ತಡ ಹೇರಿದ್ದಾರೆ. ಚನ್ನಪಟ್ಟಣ ಕಾರ್ಯಕರ್ತರು ಕ್ಷೇತ್ರ ಬಿಟ್ಟು ಹೋಗದಂತೆ ಒತ್ತಡ ಹಾಕಿದ್ದಾರೆ.
ಈ ಹಿನ್ನೆಲೆಯಲ್ಲಿ ಇಂದು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಮುಖಂಡರೊಂದಿಗೆ ಚರ್ಚೆ ನಡೆಸಿ ಕುಮಾರಸ್ವಾಮಿ ನಿರ್ಧಾರ ಕೈಗೊಳ್ಳದಿದ್ದಾರೆ. ಮಂಡ್ಯ ಕಾರ್ಯಕರ್ತರಿಗೆ ನಿರಾಸೆ ಮಾಡುವುದಿಲ್ಲ. ಎಲ್ಲರೊಂದಿಗೂ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಜೆಡಿಎಸ್ ರಾಜ್ಯ ಅಧ್ಯಕ್ಷರಾಗಿರುವ ಹೆಚ್.ಡಿ. ಕುಮಾರಸ್ವಾಮಿ ಇಂದು ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಹೆಸರು ಪ್ರಕಟಿಸಲಿದ್ದಾರೆ. ಮಂಡ್ಯ ಜನರು ಕುಮಾರಸ್ವಾಮಿಯವರೇ ಅಭ್ಯರ್ಥಿಯಾಗಬೇಕೆಂದು ಒತ್ತಡ ಹಾಕುತ್ತಿದ್ದಾರೆ. ಚನ್ನಪಟ್ಟಣ ಕ್ಷೇತ್ರ ಬಿಟ್ಟು ಹೋಗದಂತೆ ಅಲ್ಲಿನ ಕಾರ್ಯಕರ್ತರು ಕೂಡ ಒತ್ತಾಯಿಸುತ್ತಿದ್ದಾರೆ. ಈ ನಡುವೆ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಬೇಕೆಂದು ಕೆಲವು ಕಾರ್ಯಕರ್ತರು ಒತ್ತಡ ಹಾಕುತ್ತಿರುವ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿ ಕುಮಾರಸ್ವಾಮಿ ತೀರ್ಮಾನ ಕೈಗೊಳ್ಳಲಿದ್ದಾರೆ.