
ಮಂಡ್ಯ: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಮಂಡ್ಯದಲ್ಲಿ ನಡೆದಿದ್ದ ಹೆಣ್ಣುಭ್ರೂಣ ಪತ್ತೆ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಪ್ರಕರಣ ಸಂಬಂಧ ಕಳೆದ ನಾಲ್ಕೈದು ದಿನಗಳಲ್ಲಿಯೇ ಒಟ್ಟು ಆರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ಒಂಟಿ ಮನೆ, ಕಾರಿನಲ್ಲಿಯೂ ಸ್ಕ್ಯಾನಿಂಗ್ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಹೆಣ್ಣುಭ್ರೂಣ ಹತ್ಯೆಗೆ 10 ಸಾವಿರದಿಂದ 50 ಸಾವಿರವರೆಗೂ ಚಾರ್ಜ್ ಮಾಡುತ್ತಿದ್ದರು.
ಹಲವು ವರ್ಷಗಳಿಂದ ಮಂಡ್ಯ ಹಾಗೂ ಮೈಸೂರಿನಲ್ಲಿ ಈ ಕರಾಳ ದಂಧೆ ನಡೆಸುತ್ತಿದ್ದರು. ಇದೀಗ ಆರೋಪಿಗಳನ್ನು ಬಂಧಿಸಲಾಗಿದೆ. ರಾಮಕೃಷ್ಣ ಗುರು, ಸೋಮಶೇಖರ್ ಪಟೇಲ್, ಹಿರೇಮರಳಿಯ ನವೀನ್, ಹರಹಳ್ಳಿಯ ಜಬ್ಬರ್, ಕೆ.ಆರ್.ನಗರದ ಶಂಕರ್ ಬಂಧಿತ ಆರೋಪಿಗಳು.
ಬಂಧಿತರಿಂದ ಸ್ಕ್ಯಾನಿಂಗ್ ಮಶಿನ್, ಕಾರು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು 50ಕ್ಕೂ ಹೆಚ್ಚು ಭ್ರೂಣಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಹೆಣ್ಣುಭ್ರೂಣ ಹತ್ಯೆ ಪ್ರಕರಣ ಸಂಬಂಧ ವಾರದ ಹಿಂದೆ ಪ್ರಕರಣದ ಕಿಂಗ್ ಪಿನ್ ಅಭಿಷೇಕ್, ವೀರೇಶ್ ಸೇರಿದಂತೆ 12 ಆರೋಪಿಗಳನ್ನು ಬಂಧಿಸಲಾಗಿತ್ತು.