ಮಂಡ್ಯ: ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿಗಳು ಕೆಲಸದ ಸಮಯದಲ್ಲಿ ಶಿಸ್ತಿನಿಂದ ಕಾರ್ಯ ನಿರ್ವಹಿಸುವಂತೆ ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.
ಸಿಬ್ಬಂದಿಗಳು ಹಾಗೂ ಕೆಲ ಅಧಿಕಾರಿಗಳು ಸರಿಯಾದ ಸಮಯಕ್ಕೆ ಕಚೇರಿಗೆ ಬರದೇ, ಬೇಕಾ ಬಿಟ್ಟಿಯಾಗಿ ಬರುವುದು, ಬೇಜವಾಬ್ದಾರಿಯಿಂದ ಕೆಲಸ ಮಾಡುವುದು, ಕಚೇರಿಯ ಸಮಯದಲ್ಲಿ ಟೀ, ಕಾಫಿ ನೆಪದಲ್ಲಿ ಹೊಗಡೆ ಓಡಾಡುತ್ತಾ ಕಾಲಹರಣ ಮಾಡುತ್ತಿದ್ದರು. ಸಿಬ್ಬಂದಿಗಳ ಈ ವರ್ತನೆಗೆ ಕಡುವಾಣ ಹಾಕುವ ನಿಟ್ಟಿನಲ್ಲಿ ಕಚೇರಿ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಸೂಚಿಸಿದ್ದಾರೆ.
ಕಚೇರಿಯ ನಿಗದಿತ ಅವಧಿಯಲ್ಲಿ ಸಮಯಪ್ರಜ್ಞೆ ಪಾಲನೆ ಮಾಡುವುದು ಕಡ್ಡಾಯ. ನಿಯಮ ಉಲ್ಲಂಘನೆ ಮಾಡುವವರಿಗೆ ಲಿಖಿತ ರೂಪದಲ್ಲಿ ಎಚ್ಚರಿಕೆ ನೀಡುವಂತೆ ಇಲಾಖೆ ಮುಖ್ಯಸ್ಥರಿಗೆ ಸೂಚಿಸಲಾಗಿದೆ. ಕರ್ತವ್ಯದ ವೇಳೆಯಲ್ಲಿ ಟೀ, ಕಾಫಿ ನೆಪ ಹೇಳಿ ಸಿಬ್ಬಂದಿಗಳು ಕಚೇರಿಯಿಂದ ಹೊರ ಹೋಗುವಂತಿಲ್ಲ. ಎಲ್ಲಾ ಕಚೇರಿಗಳಲ್ಲಿಯೂ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯ. ಕಚೇರಿ ಮುಖ್ಯಸ್ಥರು ವಾರಕ್ಕೆ ಒಮ್ಮೆ ಹಾಜರಾತಿ ಪರಿಶೀಲನೆ ನಡೆಸಬೇಕು. ಎಲ್ಲಾ ಶಾಖೆಗಳಿಗೂ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಗುರುತಿನ ಚೀಟಿ ಕಡ್ಡಾಯ. ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು, ಸಿಬ್ಬಂದಿಗಳ ಮೇಜಿನ ಮೇಲೆ ಅಧಿಕಾರಿ, ಸಿಬ್ಬಂದಿ ಹೆಸರು, ಪದನಾಮ ಸೂಚಿಸುವ ನಾಮಫಲಕ ಅಳವಡಿಸಬೇಕು ಎಂದು ಉಪವಿಭಾಗಾಧಿಕಾರಿಗಳು, ತಹಶೀಲ್ದಾರ್, ಕಚೇರಿ ಸಹಾಯಕರು, ಶಾಖಾ ಮುಖ್ಯಸ್ಥರಿಗೆ ಡಿಸಿ ಆದೇಶ ನೀಡಿದ್ದಾರೆ.