ಮಂಡ್ಯ: ಹನಿಟ್ರ್ಯಾಪ್ ಸುಳಿಯಲ್ಲಿ ಸಿಲುಕಿದ ಬಿಜೆಪಿ ಮುಖಂಡ ಹಣ ಕಳೆದುಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಮುಖಂಡ ಮಂಡ್ಯದ ಪ್ರತಿಷ್ಠಿತ ಚಿನ್ನದ ವ್ಯಾಪಾರಿ ಕೂಡ ಆಗಿದ್ದು, ಅವರಿಂದ 50 ಲಕ್ಷ ರೂಪಾಯಿ ಸುಲಿಗೆ ಮಾಡಲಾಗಿದೆ.
ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಗೆ ಉದ್ಯಮಿ ದೂರು ನೀಡಿದ್ದಾರೆ. ಆರು ತಿಂಗಳ ನಂತರ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಬಿಜೆಪಿ ಮುಖಂಡ, ಧಾರ್ಮಿಕ ಪರಿಷತ್ ಸದಸ್ಯನಾಗಿರುವ ಮಂಡ್ಯದ ಪ್ರತಿಷ್ಠಿತ ಚಿನ್ನದ ಅಂಗಡಿ ಮಾಲೀಕ ದಕ್ಷಿಣ ಕನ್ನಡ ಜಿಲ್ಲೆಯಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯೂ ಆಗಿದ್ದಾರೆ. ಅವರು ನೀಡಿದ ದೂರಿನ ಆಧಾರದಲ್ಲಿ ಸಲ್ಮಾಬಾನುರನ್ನು ಬಂಧಿಸಲಾಗಿದೆ.
ಸಮಾಜ ಸೇವೆ ಮತ್ತು ಮಾನವ ಹಕ್ಕು ಹೋರಾಟದಲ್ಲಿ ಗುರುತಿಸಿಕೊಂಡಿದ್ದ ಸಲ್ಮಾ ಫೆಬ್ರವರಿ 26 ರಂದು ಮೈಸೂರಿನ ದರ್ಶನ್ ಪ್ಯಾಲೇಸ್ ನಲ್ಲಿ ಹನಿಟ್ರ್ಯಾಪ್ ನಡೆಸಿದ್ದರು. ಮಂಗಳೂರಿಗೆ ತೆರಳಲು ಮಂಡ್ಯದಲ್ಲಿ ಮುಖಂಡ ಬಸ್ ಗಾಗಿ ಕಾಯುತ್ತಿದ್ದರು. ಮೈಸೂರಿಗೆ ಡ್ರಾಪ್ ಕೊಡುವುದಾಗಿ ಕಾರ್ ನಲ್ಲಿ ನಾಲ್ವರು ಕರೆದುಕೊಂಡು ಹೋಗಿದ್ದರು. ಚಿನ್ನದ ಪರೀಕ್ಷೆಗೆ ಎಂದು ಅವರನ್ನು ಅಪಹರಿಸಿ ಹನಿಟ್ರ್ಯಾಪ್ ಮಾಡಿರುವ ಆರೋಪ ಕೇಳಿಬಂದಿದೆ.
ಲಾಡ್ಜ್ ರೂಮ್ ಗೆ ಕರೆದೊಯ್ಯುತ್ತಿದ್ದಂತೆ ಯುವತಿ ಜೊತೆ ವಿಡಿಯೋ ಚಿತ್ರೀಕರಿಸಿಕೊಂಡು 4 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಅಂತಿಮವಾಗಿ ಮುಖಂಡ 50 ಲಕ್ಷ ರೂಪಾಯಿ ನೀಡಿ ತೆರಳಿದ್ದರು. ಇತ್ತೀಚೆಗೆ ಮತ್ತೆ ಹಣಕ್ಕೆ ಬೇಡಿಕೆ ಇಟ್ಟು ಬೆದರಿಕೆ ಹಾಕಿದ್ದ ಹಿನ್ನಲೆಯಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ.