ಮಂಡ್ಯ: ಕೌಟುಂಬಿಕ ಕಲಹ, ಮಾನಸಿಕ ಒತ್ತಡಕ್ಕೆ ಬೇಸತ್ತು ಇತ್ತೀಚೆಗೆ ಮಹಿಳೆಯರು ಆತ್ಮಹತ್ಯೆಗೆ ಶರಣಾಗುತ್ತಿರುವ ಪ್ರಕರಣ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇಲ್ಲೊಬ್ಬ ತಾಯಿ ತನ್ನ ಪುಟ್ಟ ಮಗುವಿನ ಎದುರೇ ನೇಣಿಗೆ ಕೊರಳೊಡ್ದಿದ ಹೃದಯವಿದ್ರಾವಕ ಘಟನೆ ಮಂಡ್ಯ ಜಿಲ್ಲೆ ಕೆಂಪೇಗೌಡ ಬಡಾವಣೆಯಲ್ಲಿ ನಡೆದಿದೆ.
36 ವರ್ಷದ ಕವಿತಾ ನೇಣಿಗೆ ಶರಣಾದ ಮಹಿಳೆ. ಕವಿತಾಳಿಗೆ ಇಬ್ಬರು ಮಕ್ಕಳಿದ್ದಾರೆ. ಅದರಲ್ಲೂ ಒಂದು ಮಗು ಇನ್ನೂ ಒಂದು ವರ್ಷದ ಪುಟ್ಟ ಕಂದಮ್ಮ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಗುವಿನ ಎದುರಲ್ಲೇ ಕವಿತಾ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಪ್ರಪಂಚದ ಅರಿವೂ ಇಲ್ಲದ ಮಗು ತಾಯಿಗಾಗಿ ಅತ್ತು ಅತ್ತು ಕಣ್ಣೀರಿಟ್ಟು ಸುಸ್ತಾಗಿದ್ದಾಳೆ. ಮಗುವಿನ ಆಕ್ರಂದನ ಕೇಳಿ ಅಕ್ಕಪಕ್ಕದ ಮನೆಯವರು ಕಿಟಕಿ ತೆಗೆದು ನೋಡಿದಾಗ ಕವಿತಾ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ದೈಹಿಕ ಶಿಕ್ಷಕನಾಗಿರುವ ರವಿಕುಮಾರ್ ಜತೆ 9 ವರ್ಷಗಳ ಹಿಂದೆ ಕವಿತಾ ಮದುವೆಯಾಗಿದ್ದು, ದಂಪತಿಗೆ 7 ವರ್ಷದ ಗಂಡು ಮಗು ಹಾಗೂ ಒಂದು ವರ್ಷದ ಹೆಣ್ಣು ಮಗು ಇಬ್ಬರು ಮಕ್ಕಳಿದ್ದಾರೆ. ಇದೀಗ ಕವಿತಾ ಏಕಾಏಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.