ಟೋಕಿಯೋ ಒಲಿಂಪಿಕ್ನ 75 ಕೆಜಿ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾರತವನ್ನ ಪ್ರತಿನಿಧಿಸುತ್ತಿದ್ದ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಸುಂದರ ನಗರ ನಿವಾಸಿ ಆಶಿಷ್ ಕುಮಾರ್ ಅರ್ಹತಾ ಸುತ್ತಿನಲ್ಲಿ ಸೋಲನ್ನ ಕಂಡಿದ್ದಾರೆ. ಚೀನಾದ ಆಟಗಾರನ ವಿರುದ್ಧ ಆಶಿಷ್ ಕುಮಾರ್ ಸೆಣೆಸಿದ್ದರು. ಆಶಿಷ್ ಕುಮಾರ್ ಅರ್ಹತಾ ಸುತ್ತಿನಲ್ಲಿ ಗೆಲ್ಲುವ ಎಲ್ಲಾ ಪ್ರಯತ್ನವನ್ನೂ ಮಾಡಿದ್ದರು. ಆದರೆ ಚೀನಾದ ಆಟಗಾರ ಈ ಸುತ್ತಿನಲ್ಲಿ ಆಶಿಷ್ರನ್ನ ಮೀರಿಸಿದ್ದಾರೆ. ಈ ಮೂಲಕ ಒಲಿಂಪಿಕ್ನಲ್ಲಿ ಪದಕ ಗೆಲ್ಲುವ ಕನಸು ಆಶಿಷ್ ಪಾಲಿಗೆ ಕನಸಾಗಿಯೇ ಉಳಿದಿದೆ.
ಇನ್ನು ಒಲಿಂಪಿಕ್ ಪಂದ್ಯಾವಳಿಯಲ್ಲಿ ಪುತ್ರನ ಪ್ರದರ್ಶನದ ವಿಚಾರವಾಗಿ ಮಾತನಾಡಿದ ತಾಯಿ ದುರ್ಗಾ ದೇವಿ, ಇಂದು ಸೋತಿದ್ದಾನೆ ಎಂದರೆ ನಾಳೆ ಗೆಲ್ಲುತ್ತಾನೆ ಎಂದೇ ಅರ್ಥ ಎಂದು ಹೇಳುವ ಮೂಲಕ ಭವಿಷ್ಯದಲ್ಲಿ ತಮ್ಮ ಪುತ್ರ ಒಲಿಂಪಿಕ್ ಪದಕಕ್ಕೆ ಮುತ್ತಿಕ್ಕಲಿದ್ದಾನೆ ಎಂಬ ಭರವಸೆ ವ್ಯಕ್ತಪಡಿಸಿದ್ರು. ಇತ್ತ ಆಶಿಷ್ ಸೋದರ ಸಂಬಂಧಿ ಕೂಡ ಈ ವಿಚಾರವಾಗಿ ಮಾತನಾಡಿದ್ದು ಒಲಿಂಪಿಕ್ನಲ್ಲಿ ಆಶಿಷ್ ಒಳ್ಳೆಯ ಪ್ರದರ್ಶನ ನೀಡಿದ್ದಾನೆ. ಇದಕ್ಕಾಗಿ ನಮಗೆಲ್ಲ ಖುಷಿ ಇದೆ. ನಮ್ಮ ಕುಟುಂಬದ ಸದಸ್ಯ ಇಷ್ಟು ಮಹತ್ತರ ಸ್ಥಾನಕ್ಕೆ ಏರಿದ್ದಾನೆ ಅನ್ನೋದೇ ನಮಗೆಲ್ಲ ಹೆಮ್ಮೆಯ ವಿಚಾರವಾಗಿದೆ ಎಂದು ಹೇಳಿದ್ರು.
ಪದಕ ಗೆಲ್ಲದೇ ಇದ್ದರೂ ಸಹ ಆಶಿಷ್ ಕುಮಾರ್ ತಮ್ಮ ಮೃತ ತಂದೆಯ ಕನಸನ್ನು ಪೂರ್ತಿಗೊಳಿಸಿದ್ದಾರೆ. ಆಶಿಷ್ ತಂದೆ ತಮ್ಮ ಪುತ್ರ ಒಂದಲ್ಲ ಒಂದು ದಿನ ಒಲಿಂಪಿಕ್ಸ್ನಲ್ಲಿ ಆಡಬೇಕು ಎಂಬ ಕನಸನ್ನ ಹೊಂದಿದ್ದರಂತೆ. ಆಶಿಷ್ ಒಲಿಂಪಿಕ್ ಪಂದ್ಯಾವಳಿಗೆ ಆಯ್ಕೆಯಾಗುವ ನಾಲ್ಕು ದಿನಗಳ ಹಿಂದಷ್ಟೇ ಅವರ ತಂದೆ ನಿಧನರಾಗಿದ್ದರು. ಹೀಗಾಗಿ ಆಶಿಷ್ ಪದಕ ವಂಚಿತರಾದರೂ ಸಹ ತಮ್ಮ ತಂದೆಯ ಕನಸನ್ನು ಸಾಕಾರಗೊಳಿಸಿದ್ದಾರೆ ಅನ್ನೋದ್ರಲ್ಲಿ ಎರಡು ಮಾತಿಲ್ಲ.