
ಬೆಂಗಳೂರು: ಕ್ಯಾಪ್ ಧರಿಸದೆ ಸಂಚಾರಿ ಪೊಲೀಸರು ಕರ್ತವ್ಯ ನಿರ್ವಹಿಸೋ ಹಾಗಿಲ್ಲ ಎಂದು ಸಂಚಾರಿ ಜಂಟಿ ಪೊಲೀಸ್ ಆಯುಕ್ತ ಅನುಚೇತ್ ಆದೇಶಿಸಿದ್ದಾರೆ.
ಇತ್ತೀಚೆಗೆ ಹೆಬ್ಬಾಳ ಬಳಿ ಕ್ಯಾಪ್ ಧರಿಸದೆ ಸಂಚಾರಿ ಕಾನ್ಸ್ ಟೇಬಲ್ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ವಕೀಲ ಜಗದೀಶ್ ಪ್ರಶ್ನೆ ಮಾಡಿ ವಿಡಿಯೋ ಮಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಕರ್ತವ್ಯ ನಿರ್ವಹಿಸುವ ವೇಳೆ ಕ್ಯಾಪ್ ಧರಿಸೋದು ಕಡ್ಡಾಯ ಎಂದು ಆದೇಶ ಹೊರಡಿಸಲಾಗಿದೆ.
ಅಷ್ಟೇ ಅಲ್ಲದೇ ಕರ್ತವ್ಯ ನಿರ್ವಹಿಸುವ ವೇಳೆ ಬೈಕ್ ಮೇಲೆ ಕೂರುವ ಹಾಗಿಲ್ಲ ಎಂದು ನಗರ ಎಲ್ಲಾ ಸಂಚಾರ ಪೊಲೀಸ್ ಠಾಣಾ ಸಿಬ್ಬಂದಿಗೂ ಸೂಚನೆ ನೀಡಲಾಗಿದೆ.
ಸೆ. 6 ರಂದು ಬೆಂಗಳೂರು ನಗರ ಸಂಚಾರ ಜಂಟಿ ಪೊಲೀಸ್ ಆಯುಕ್ತರು ಸಭೆ ನಡೆಸಿ ಸೂಚನೆ ನೀಡಿದ್ದಾರೆ.
ದಿನಾಂಕ:07.09.2024 ರಿಂದ ಮುಂದಿನ 10 ದಿನಗಳ ಕಾಲ ಯಾವುದೇ ವಾರದ ರಜೆ ಇರುವುದಿಲ್ಲ.
ದಿನಾಂಕ:07.09.2024 ರಿಂದ ಮುಂದಿನ 10 ದಿನಗಳ ಕಾಲ ಯಾವುದೇ ಆಕಸ್ಮಿಕ ರಜೆ ಇರುವುದಿಲ್ಲ.
ಪ್ರತಿ ದಿನ ಸಂಜೆ 05-00 ಗಂಟೆಯ ನಂತರ ಎಲ್ಲಾ ಪಿ.ಎಸ್.ಐ, ಎ.ಎಸ್.ಐ ಹಾಗೂ ಸಿಬ್ಬಂದಿಗಳು ರಿಪ್ಲೆಕ್ಟಿವ್ ಜಾಕೇಟ್ ಅನ್ನು ಧರಿಸಿ ಕರ್ತವ್ಯ ನಿರ್ವಹಿಸುವುದು.
ಠಾಣೆಯ ಎಲ್ಲಾ ಸಿಬ್ಬಂದಿಗಳು ಕರ್ತವ್ಯದ ಎಲ್ಲಾ ಸಮಯದಲ್ಲೂ ಕ್ಯಾಪ್ ಧರಿಸಿಕೊಂಡು ಕರ್ತವ್ಯ ನಿರ್ವಹಿಸುವುದು.
ಠಾಣೆಯ ಎಲ್ಲಾ ಕೋಬ್ರಾ ಸಿಬ್ಬಂದಿಗಳು ಪ್ರತಿ ದಿನ 08-00 ಗಂಟೆಗೆ ಟ್ಯಾಬ್ ಆನ್ ಮಾಡಿಟ್ಟುಕೊಂಡು ಕರ್ತವ್ಯ ನಿರ್ವಹಿಸುವುದು.
ಠಾಣೆಯ ಪಿ.ಎಸ್.ಐ. ಹಾಗೂ ಎ.ಎಸ್.ಐ ಅವರುಗಳು ಐ.ಎಂ.ವಿ ಪ್ರಕರಣಗಳನ್ನು ದಾಖಲು ಮಾಡುವಾಗ ಬೈಕ್ ಮೇಲೆ ಕುಳಿತುಕೊಂಡು ಪ್ರಕರಣ ದಾಖಲು ಮಾಡುವಂತಿಲ್ಲ. ಕ್ಯಾಪ್ ಧರಿಸಿಕೊಂಡು ಪ್ರಕರಣಗಳನ್ನು ದಾಖಲು ಮಾಡಬೇಕು.
ಎಲ್ಲಾ ಸಿಬ್ಬಂದಿಗಳು ಕರ್ತವ್ಯದ ಸಮಯದಲ್ಲಿ ಬೈಕ್ ಮೇಲೆ ಅಥವಾ ಕಾಲುಮೇಲೆ ಕಾಲು ಹಾಕಿಕೊಂಡು ಕುಳಿತುಕೊಳ್ಳಬಾರದು. ಒಂದು ವೇಳೆ ಕರ್ತವ್ಯದ ಸಮಯದಲ್ಲಿ ಬೈಕ್ ಮೇಲೆ ಕುಳಿತುಕೊಂಡಿರುವುದು ಮೇಲಾಧಿಕಾರಿಗಳ ಗಮನಕ್ಕೆ ಬಂದಲ್ಲಿ ಮುಂದಿನ ಆಗುಹೋಗುಗಳಿಗೆ ನೀವೇ ಜವಾಬ್ದಾರರು ಎಂದು ತಿಳಿಸಲಾಗಿದೆ.