ಬೆಂಗಳೂರು: ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪಡೆದುಕೊಳ್ಳುವ ಫಲಾನುಭವಿಗಳಿಗೆ ಪಡಿತರದ ಜೊತೆಗೆ ಮುದ್ರಿತ ರಶೀದಿ ನೀಡುವುದು ಕಡ್ಡಾಯವಾಗಿದೆ. ಈ ಕುರಿತಾಗಿ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಮಾರ್ಗಸೂಚಿ ಹೊರಡಿಸಿದೆ.
ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಅಡಿ ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿರುವುದರಿಂದ ಈ ಯೋಜನೆಯ ಬಗ್ಗೆ ಜನರಿಗೆ ತಿಳಿಸುವ ಉದ್ದೇಶದಿಂದ ರಶೀದಿ ನೀಡುವುದನ್ನು ಕಡ್ಡಾಯ ಮಾಡಲಾಗಿದೆ ಎಂದು ಹೇಳಲಾಗಿದೆ.
ಯೋಜನೆಯ ಹೆಸರು, ಜಿಲ್ಲೆ, ತಾಲೂಕು, ಫಲಾನುಭವಿಯ ಹೆಸರು, ಒಟ್ಟು ಸದಸ್ಯರ ಸಂಖ್ಯೆ, ಹಂಚಿಕೆಯ ದಿನಾಂಕ, ಆಹಾರ ಧಾನ್ಯದ ವಿವರ ಹಾಗೂ ಇದಕ್ಕೆ ತಗಲುವ ವೆಚ್ಚ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಾಯಧನ ಎಷ್ಟು ಎಂಬುದು ಸೇರಿದಂತೆ ಹಲವು ಮಾಹಿತಿ ಮುದ್ರಿತ ರಶೀದಿಯಲ್ಲಿರಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರತ್ಯೇಕ ಯೋಜನೆಗಳ ವಿವರವನ್ನು ರಶೀದಿಯಲ್ಲಿ ನಮೂದಿಸಲಾಗುವುದು.
ಕೇಂದ್ರ ಸರ್ಕಾರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಬಿಪಿಎಲ್ ಕಾರ್ಡ್ ದಾರರಿಗೆ ಉಚಿತವಾಗಿ 5ಕೆಜಿ ಅಕ್ಕಿ ವಿತರಿಸಲಾಗುತ್ತಿದೆ. ಈ ಅಕ್ಕಿ ತನ್ನದು ಎಂದು ರಾಜ್ಯ ಸರ್ಕಾರ ಬಿಂಬಿಸಿಕೊಳ್ಳುತ್ತಿದೆ. ಹೀಗಾಗಿ ಕೇಂದ್ರದಿಂದ ರಶೀದಿ ಕಡ್ಡಾಯಗೊಳಿಸಿ ನಿಯಮ ರೂಪಿಸಲಾಗಿದೆ. ರಾಜ್ಯದಲ್ಲಿ 1.16 ಕೋಟಿ ಬಿಪಿಎಲ್ ಕಾರ್ಡ್ ಗಳಿಗೆ 2.17 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯವನ್ನು ಪ್ರತಿ ತಿಂಗಳು ವಿತರಿಸಲಾಗುತ್ತದೆ.
ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಅಡಿ ಬಿಪಿಎಲ್ ಕುಟುಂಬದ ಪ್ರತಿ ವ್ಯಕ್ತಿಗೆ ತಲಾ 5 ಕೆಜಿ ಅಕ್ಕಿ ನೀಡುತ್ತಿದೆ. ಕೆಲವು ಕಡೆ ಮೂರು ಕೆಜಿ ಅಕ್ಕಿ ಹಾಗೂ ಎರಡು ಕೆಜಿ ಬೇರೆ ಧಾನ್ಯ ವಿತರಿಸಲಾಗುತ್ತಿದೆ. ರಾಜ್ಯ ಸರ್ಕಾರ ಅನ್ನ ಭಾಗ್ಯ ಯೋಜನೆ ಅಡಿ 5 ಕೆಜಿ ಅಕ್ಕಿ ಬದಲಿಗೆ ಫಲಾನುಭವಿಗಳ ಖಾತೆಗೆ ಹಣ ಪಾವತಿಸುತ್ತಿದೆ. ನ್ಯಾಯಬೆಲೆ ಅಂಗಡಿಗಳ ಮಾಲೀಕರು ಪ್ರತಿ ತಿಂಗಳು ಪಡಿತರ ಪಡೆಯುವ ಫಲಾನುಭವಿಗಳಿಗೆ ಮುದ್ರಿತ ರಶೀದಿ ನೀಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.