ಇಂದೋರ್ ಬೈಪಾಸ್‌ನಲ್ಲಿ ಗುರುವಾರ ರಾತ್ರಿ ನಡೆದ ಕಾರು ಅಪಘಾತದಲ್ಲಿ ಐಟಿ ಕಂಪೆನಿಯ ಮ್ಯಾನೇಜರ್ ಪ್ರಣಯ್ ತಲ್ರೇಜಾ ಸಾವನ್ನಪ್ಪಿದ್ದಾರೆ. ಅವರ ಗೆಳತಿಯ ಸ್ನೇಹಿತೆ ಖುಷಿ ಕೂಡ ಅಪಘಾತದಲ್ಲಿ ಗಾಯಗೊಂಡಿದ್ದಾರೆ.
ಪ್ರಣಯ್, ವಿದ್ಯಾರ್ಥಿನಿ ಖುಷಿಯೊಂದಿಗೆ ಕಾರಿನಲ್ಲಿ ಬೈಪಾಸ್‌ಗೆ ತೆರಳಿದ್ದರು. ವೇಗವಾಗಿ ಚಲಿಸುತ್ತಿದ್ದ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ಕಾರು 360 ಡಿಗ್ರಿ ತಿರುಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಖುಷಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಎರಡೂ ಕೈಗಳಿಗೆ ಗಾಯಗಳಾಗಿವೆ ಎಂದು ಹೇಳಲಾಗಿದೆ.
ಪೊಲೀಸರ ಪ್ರಕಾರ, ಈ ಘಟನೆ ಸೇತುವೆಯ ಕೆಳಗಿನ ಸರ್ವಿಸ್ ರಸ್ತೆಯಲ್ಲಿ ನಡೆದಿದೆ. ಎಸ್‌ಪಿ ವಿಲ್ಲಾ (ಬೈಪಾಸ್) ನಿವಾಸಿ ಪ್ರಣಯ್ ಸಂಜಯ್ ತಲ್ರೇಜಾ ಅವರು ಲೋಕಮಾನ್ಯ ನಗರದ ನಿವಾಸಿ ಖುಷಿ ಲಮ್ಗೆ ಎಂಬ ತಮ್ಮ ಸ್ನೇಹಿತೆಯೊಂದಿಗೆ ಕಾರಿನಲ್ಲಿ ತೆರಳುತ್ತಿದ್ದರು. ರಾತ್ರಿ ಸುಮಾರು 2.30 ರ ಸುಮಾರಿಗೆ, ಹನುಮಾನ್ ದೇವಸ್ಥಾನದ ಬಳಿ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.
ಪ್ರಣಯ್ ಸ್ಟೀರಿಂಗ್ ಮತ್ತು ಸೀಟ್ ನಡುವೆ ಸಿಲುಕಿಕೊಂಡಿದ್ದು, ಅವರ ತಲೆ ಮತ್ತು ಕಿವಿಗಳಿಂದ ರಕ್ತಸ್ರಾವವಾಗಿತ್ತು. ಅವರು ಸೀಟ್ ಬೆಲ್ಟ್ ಧರಿಸಿರಲಿಲ್ಲ, ಇದು ಅವರ ಗಾಯಗಳ ತೀವ್ರತೆಗೆ ಕಾರಣವಾಗಿರಬಹುದು ಎನ್ನಲಾಗಿದೆ. ಸೀಟ್ ಬೆಲ್ಟ್ ಧರಿಸಿದ್ದ ಖುಷಿಗೆ ಕೈ ಮತ್ತು ತಲೆಗೆ ಗಾಯಗಳಾಗಿವೆ.
ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪ್ರಣಯ್ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಕಳುಹಿಸಿ ಖುಷಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಖುಷಿ DAVV ಯಲ್ಲಿ MBA ವ್ಯಾಸಂಗ ಮಾಡುತ್ತಿದ್ದರೆ ಖುಷಿ ಪ್ರಣಯ್ ಅವರ ಗೆಳತಿ ಪ್ರೇಕ್ಷಾ ಅವರ ಸ್ನೇಹಿತೆ. ಉದ್ಯಮಿ ತಂದೆಯ ಏಕೈಕ ಪುತ್ರನಾಗಿದ್ದ ಪ್ರಣಯ್ ಐಟಿ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು.