ಮನೆಯಿಂದ ಕೆಲಸ ಮಾಡುವ ವೇಳೆ ಕಚೇರಿಯ ಆನ್ಲೈನ್ ಮೀಟಿಂಗ್ ಸಂದರ್ಭದಲ್ಲಿ ಏನೆಲ್ಲಾ ವಿನೋದಮಯ ಸನ್ನಿವೇಶಗಳು ಎದುರಾಗುತ್ತವೆ ಎಂದು ನಾವೆಲ್ಲಾ ತಿಳಿದಿದ್ದೇವೆ ಅಲ್ಲವೇ ?
ಮೀಟಿಂಗ್ ಬಗ್ಗೆ ಏನೂ ಗೊತ್ತಿರದ ಮಕ್ಕಳು, ಹಿರಿಯರು, ಸಾಕು ಪ್ರಾಣಿಗಳು ಕ್ಯಾಮೆರಾ ಮುಂದೆ ಹಾಗೇ ತಮಗೆ ಅರಿವಿಲ್ಲದೇ ಹಾದು ಹೋಗುವುದೋ ಇಲ್ಲ ಏನಾದರೂ ಚೇಷ್ಟೆ ಮಾಡುವುದೋ ಮಾಡಿದಾಗ ಮೀಟಿಂಗ್‌ನಲ್ಲಿರುವ ಎಲ್ಲರಿಗೂ ಒಂದು ರೀತಿಯ ಮೋಜು ಸಿಗುತ್ತದೆ.
ಇಂಥ ಅನೇಕ ಸನ್ನಿವೇಶಗಳ ಮೀಟಿಂಗ್ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಅದಾಗಲೇ ವೈರಲ್ ಆಗಿದ್ದು, ನೆಟ್ಟಿಗರು ಅವುಗಳನ್ನು ನೋಡಿ ತಮಗೂ ಅಂಥದ್ದೇ ಅನುಭವಗಳಾಗಿರುವ ವಿಚಾರ ಹಂಚಿಕೊಂಡಿದ್ದಾರೆ.
ಇಂಥದ್ದೇ ಮತ್ತೊಂದು ನಿದರ್ಶನ 28ರ ವಂದನಾ ಜೈನ್‌ರದ್ದು. ತಮ್ಮ ತಂಡದೊಂದಿಗೆ ಆನ್ಲೈನ್ ಮೀಟಿಂಗ್‌ನಲ್ಲಿದ್ದ ವಂದನಾ ತಮ್ಮ ಮೈಕ್ ಮ್ಯೂಟ್ ಆಗಿದೆ ಎಂದು ಭಾವಿಸಿ ಚಿಪ್ಸ್ ತಿನ್ನಲು ಆರಂಭಿಸಿದ್ದರು.
ಆದರೆ ವಂದನಾ ಗ್ರಹಚಾರಕ್ಕೆ ಮೈಕ್ ಮ್ಯೂಟ್ ಆಗಿರಲಿಲ್ಲ, ಅಲ್ಲದೇ ಆಕೆ ಚಿಪ್ಸ್ ಕುರುಕುವ ಸದ್ದು ಜೋರಾಗಿಯೇ ಪ್ರಸರಣಗೊಂಡು ಮೀಟಿಂಗ್‌ನಲ್ಲಿದ್ದ ಎಲ್ಲರಿಗೂ ಕೇಳಿಸಿದೆ.
ಕೂಡಲೇ ವಂದನಾಗೆ ಎಚ್ಚರಿಸಿದ ಮ್ಯಾನೇಜರ್, ಮೃದು ಭಾಷೆಯಲ್ಲಿಯೇ ಮೆಸೇಜ್ ಮಾಡಿ, “ನಿಮ್ಮ ಮೈಕ್ ಅನ್ನು ದಯವಿಟ್ಟು ಮ್ಯೂಟ್ ಮಾಡುವಿರಾ? ನೀವು ಚಿಪ್ಸ್ ತಿನ್ನುತ್ತಿರುವ ಸದ್ದು ಬಹಳ ಜೋರಾಗಿದೆ,” ಎಂದಿದ್ದಾರೆ.
ಸಂಭಾಷಣೆಯ ಈ ತುಣುಕನ್ನು ಪೊವನ್ ಸಾಪ್ಡಿ ಹೆಸರಿನ ಟ್ವಿಟರ್ ಹ್ಯಾಂಡಲ್‌ನಲ್ಲಿ ಶೇರ್ ಮಾಡಲಾಗಿದೆ. ನೆಟ್ಟಿಗರು ಲಾಕ್‌ಡೌನ್ ದಿನಗಳ ಸಂದರ್ಭ ನೆನೆದು ಕಾಮೆಂಟ್‌ಗಳಲ್ಲಿ ತಮ್ಮ ಅನುಭವಗಳನ್ನೂ ಹಂಚಿಕೊಂಡು ಎಂಜಾಯ್ ಮಾಡುತ್ತಿದ್ದಾರೆ.