
ದೇಶದಲ್ಲಿ ಹೆಚ್ಚಿನ ಪ್ರಯಾಣಿಕರು ರೈಲ್ವೆ ಸೇವೆಯನ್ನೇ ಅವಲಂಬಿಸಿದ್ದಾರೆ. ಪ್ರತಿನಿತ್ಯ ರೈಲಿನಲ್ಲಿ ಸಂಚರಿಸೋ ಕೋಟ್ಯಂತರ ಪ್ರಯಾಣಿಕರಿದ್ದಾರೆ. ಆದರೆ ಇತ್ತೀಚಿಗೆ ರೈಲಿನಲ್ಲಿ ಪ್ರಯಾಣಿಕರು ಕಿಕ್ಕಿರಿದು ಸೇರುವ ಕ್ಷಣಗಳು ಕಾಣುತ್ತಲೇ ಇವೆ.
ಟಿಕೆಟ್ ಇಲ್ಲದೇ ಪ್ರಯಾಣಿಸುವವರು ಸಂಖ್ಯೆ ಹೆಚ್ಚಾಗ್ತಿದ್ದು, ಇದರಿಂದ ರೈಲುಗಳು ಪ್ರಯಾಣಿಕರಿಂದ ತುಂಬಿಹೋಗಿರುತ್ತವೆ ಎಂಬ ಆರೋಪಗಳೂ ಕೇಳಿಬರುತ್ತಿವೆ. ಇದರಿಂದಾಗಿ ಟಿಕೆಟ್ ಪಡೆದ, ಮುಂಗಡವಾಗಿ ಸೀಟ್ ಕಾಯ್ದಿರಿಸಿದ ಪ್ರಯಾಣಿಕರಿಗೆ ಸೀಟ್ ಸಿಗದೇ ಪರದಾಡುವಂತಾಗಿದೆ.
ಇಂತಹ ಘಟನೆಯೊಂದರಲ್ಲಿ ಪ್ರಯಾಣಿಕರೊಬ್ಬ ಮುಂಚಿತವಾಗಿ ಟಿಕೆಟ್ ಕಾಯ್ದಿರಿಸಿ, ಸೀಟ್ ಸಿಗದೇ 2 ಗಂಟೆ ಕಾಲ ಕಿಕ್ಕಿರಿದ ರೈಲಿನಲ್ಲಿ ನಿಂತುಕೊಂಡೇ ಪ್ರಯಾಣ ಮಾಡಿದ ಬಗ್ಗೆ ಬೇಸರ ವ್ಯಕ್ತಪಡಿಸಿ ರೈಲ್ವೆ ಇಲಾಖೆಯ ಗಮನ ಸೆಳೆದಿದ್ದಾರೆ. ಅಭಾಸ್ ಕುಮಾರ್ ಶ್ರೀವಾಸ್ತವ ಎಂಬುವವರು ತಮಗಾದ ಅನುಭವವನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
“4 ದಿನಗಳ ಹಿಂದೆ ಸೀಟನ್ನು ಕಾಯ್ದಿರಿಸಿದ್ದೆ ಬಳಿಕ ಕನ್ಫರ್ಮ್ ಟಿಕೆಟ್ ಪಡೆದುಕೊಂಡೆ. ಆದರೆ ರೈಲನ್ನು ಪ್ರವೇಶಿಸಿದ ನಂತರವೇ ನಾನು ನನ್ನ ಸೀಟ್ ಸಂಖ್ಯೆ 64 ಅನ್ನು ತಲುಪಲು ಸಾಧ್ಯವಾಗಲಿಲ್ಲ ಎಂದು ನಾನು ಅರಿತುಕೊಂಡೆ.ಒಂದು ಗಂಟೆಯ ನಂತರ ನಾನು ನನ್ನ ಸೀಟ್ ತಲುಪಿದಾಗ, ಗರ್ಭಿಣಿಯೊಬ್ಬರು ನಾನು ಕಾಯ್ದಿರಿಸಿದ ಸೀಟ್ ಮೇಲೆ ಕುಳಿತಿರುವುದನ್ನು ನೋಡಿದೆ. ಅವರನ್ನು ನನ್ನ ಸೀಟ್ ನಿಂದ ಏಳಿಸದೇ ಎರಡು ಗಂಟೆಗಳ ಕಾಲ ನಾನು ನಿಂತು ಪ್ರಯಾಣ ಮಾಡಿದ್ದೇನೆ” ಎಂದು ಪ್ರಯಾಣಿಕರಿಂದ ತುಂಬಿದ ರೈಲಿನ ಕೋಚ್ ನ ಫೋಟೋವನ್ನು ಅಪ್‌ಲೋಡ್ ಮಾಡಿದ್ದಾರೆ.
ರೂರ್ಕೆಲಾ ಇಂಟರ್‌ಸಿಟಿ ರೈಲಿನಲ್ಲಾದ ಈ ಅನುಭವವನ್ನು ಹಂಚಿಕೊಂಡಿರುವ ಅವರು, ಭಾರತೀಯ ರೈಲ್ವೇ, ಐಆರ್‌ಸಿಟಿಸಿ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ವ್ಯಂಗ್ಯವಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.
ಇದರೊಂದಿಗೆ ಅವರು ಎರಡನೇ ಆಸನ ಅಥವಾ 2S ವರ್ಗದಲ್ಲಿ ಸೀಟನ್ನು ಕಾಯ್ದಿರಿಸಿರುವುದಾಗಿ ಸ್ಪಷ್ಟಪಡಿಸಿದ್ದಾರೆ, ಇದು ಸಾಮಾನ್ಯವಾಗಿ ಹಗಲಿನ ಇಂಟರ್‌ಸಿಟಿ ಮತ್ತು ಜನಶತಾಬ್ದಿ ರೈಲುಗಳಲ್ಲಿ ಕಂಡುಬರುವ ನಾನ್-ಎಸಿ ಕೋಚ್. ಅದೇನೇ ಇದ್ದರೂ ಅವರ ಕೋಚ್‌ನಲ್ಲಿ ಟಿಕೆಟ್ ರಹಿತ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ, ಸಾಮಾನ್ಯ ವರ್ಗದಲ್ಲಿ ಪ್ರಯಾಣಿಸಿದ ಅನುಭವವನ್ನು ಹೊಂದಿದ್ದಾಗಿ ಅವರು ಟೀಕಿಸಿದರು.