ನಾಪತ್ತೆಯಾಗಿದ್ದ ಮಗ ಬರೋಬ್ಬರಿ 20 ವರ್ಷದ ನಂತರ ಮನೆಗೆ ಮರಳಿದ್ದು ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಇತ್ತೀಚಿಗೆ ಉತ್ತರ ಪ್ರದೇಶದ ಸಂತ ಕಬೀರ್ ನಗರದಲ್ಲಿ ತನ್ನ ಕುಟುಂಬ ಸೇರಿದ ಪ್ರಕಾಶ್ ಜಾತವ್‌ಗೆ ಇದು ಅತ್ಯಂತ ಸಂತೋಷ ಮತ್ತು ಸಮಾಧಾನದ ಕ್ಷಣವಾಗಿದೆ. ಸುಮಾರು 2003 ರಿಂದ ನಾಪತ್ತೆಯಾಗಿದ್ದ ಅವರು ತನ್ನ ಅಕ್ಕ ರಾಮಾವತಿಯನ್ನು ನೆನಪಿಸಿಕೊಳ್ಳುತ್ತಿದ್ದರು. ಸುಮಾರು 2003 ರಿಂದ ನಾಪತ್ತೆಯಾಗಿದ್ದ ಅವರಿಗೀಗ 45 ವರ್ಷ ವಯಸ್ಸು.
ಪ್ರಕಾಶ್ ಅವರು ಖಲೀಲಾಬಾದ್ ಪೊಲೀಸ್ ವ್ಯಾಪ್ತಿಯ ನೌದಂಡ್ ಗ್ರಾಮದಲ್ಲಿ ತಮ್ಮ ಪೋಷಕರು ಮತ್ತು ನಾಲ್ವರು ಒಡಹುಟ್ಟಿದವರೊಂದಿಗೆ ವಾಸಿಸುತ್ತಿದ್ದರು . 2003 ರಲ್ಲಿ ಅವರು ಸಂಬಂಧಿಕರನ್ನು ಭೇಟಿ ಮಾಡಲೆಂದು ಹೋದವರು ಮತ್ತೆ ಮನೆಗೆ ಹಿಂತಿರುಗಲಿಲ್ಲ. ಅವರ ತಂದೆ ಬ್ರಿಜ್ಲಾಲ್ ಮಗನನ್ನು ಎಲ್ಲೆಡೆ ಹುಡುಕಲು ಪ್ರಯತ್ನಿಸಿದನು. ಆದರೆ ಪ್ರಕಾಶ್ ಎಲ್ಲೂ ಸಿಗಲಿಲ್ಲ. ಇದೀಗ ಕಳೆದ ಸೋಮವಾರ ಪ್ರಕಾಶ್ ಅವರ ಹಿರಿಯ ಸಹೋದರ ಶಿವಮುರತ್ ಪುನರ್ವಸತಿ ಕೇಂದ್ರಕ್ಕೆ ಭೇಟಿ ಮಾಡಿ ತಕ್ಷಣ ಅವರನ್ನು ಗುರುತಿಸಿ ಮನೆಗೆ ಕರೆತಂದಿದ್ದಾರೆ.
ತಮ್ಮ ತವರು ಜಿಲ್ಲೆಯಿಂದ ಸುಮಾರು 500 ಕಿಮೀ ದೂರದಲ್ಲಿರುವ ಬರೇಲಿಯಲ್ಲಿ ಸಮಾಧಿಯ ಪಕ್ಕದಲ್ಲಿ ಮಾನಸಿಕ ಅಸ್ವಸ್ಥನ ಸ್ಥಿತಿಯಲ್ಲಿ ಪ್ರಕಾಶ್ ಕಾಣಿಸಿಕೊಂಡಿದ್ದರು. ಇಲ್ಲಿ ಅವರನ್ನು ಸ್ಥಳೀಯರು ಹಜರತ್ ಎಂದು ಕರೆಯುತ್ತಿದ್ದರು. ನೆನಪಿನ ಶಕ್ತಿ ಕಳೆದುಕೊಂಡು ಮಾನಸಿಕ ಅಸ್ವಸ್ಥರಂತೆ ಇದ್ದ ಅವರಿಗೆ ಸ್ಥಳೀಯರು ಊಟ ನೀಡುತ್ತಿದ್ದರು. ಇವರನ್ನು ‘ಮನೋಸಮಾರ್ಪನ್’ ಎಂಬ ಎನ್ ಜಿ ಓ ಸದಸ್ಯರು ಅಕ್ಟೋಬರ್ 31 ರಂದು ರಕ್ಷಿಸಿ, ಬರೇಲಿ ಮಾನಸಿಕ ಆಸ್ಪತ್ರೆಗೆ ಸೇರಿಸಿದರು. ಅಲ್ಲಿ ಚಿಕಿತ್ಸೆಯ ನಂತರ ಅವರು ನಿಧಾನವಾಗಿ ತಮ್ಮ ಊರು ಮತ್ತು ಸಂಬಂಧಿಕರ ವಿವರಗಳನ್ನು ಹಂಚಿಕೊಳ್ಳಲು ಪ್ರಾರಂಭಿಸಿದರು. ತನ್ನ ಅಕ್ಕ ರಾಮಾವತಿಯನ್ನು ನೆನಪಿಸಿಕೊಂಡರು.
ಬಳಿಕ ಅವರ ಕುಟುಂಬವನ್ನು ಪತ್ತೆಹಚ್ಚಲು ಮುಂದಾದ ನಂತರ ಅವರ ನಿಜವಾದ ಹೆಸರು ಪ್ರಕಾಶ್ ಎಂಬುದು ಗೊತ್ತಾಯಿತು. ಈಗ ಅವರನ್ನು ಕುಟುಂಬದೊಂದಿಗೆ ಸೇರಿಸಿದಾಗ ಅವರ ಸೋದರ ಶಿವಮೂರತ್ ನಾವು ಪ್ರಕಾಶ್ ನನ್ನು ಮತ್ತೆ ನೋಡುವ ಭರವಸೆಯನ್ನು ಕಳೆದುಕೊಂಡಿದ್ದೆವು. ಇದೀಗ ಅವರು ಮರಳಿ ಬಂದಿರುವುದು ತುಂಬಾ ಸಂತೋಷ ತಂದಿದೆ ಎಂದು ಸಂತಸ ಹಂಚಿಕೊಂಡರು.