ಚೀನಿಯರು ಮನುಷ್ಯರನ್ನೊಬ್ಬರನ್ನು ಬಿಟ್ಟು ಚಲಿಸುವ ಎಲ್ಲಾ ವಸ್ತುಗಳನ್ನೂ ತಿನ್ನುತ್ತಾರೆ ಎನ್ನುವ ಮಾತಿದೆ. ಹುಳು, ಹುಪ್ಪಡಿ, ಹಾವು, ಚೇಳುಗಳನ್ನು ಹಸಿಹಸಿಯಾಗಿಯೇ ತಿನ್ನುವ ನಂಬಲು ಅಸಾಧ್ಯವಾಗುವಂಥ ವಿಡಿಯೋಗಳೂ ಆಗಾಗ್ಗೆ ವೈರಲ್ ಆಗುತ್ತಲೇ ಇರುತ್ತವೆ. ಇದೀಗ ವ್ಯಕ್ತಿಯೊಬ್ಬ ಹಸಿಹಸಿಯಾಗಿರುವ ಏಡಿಯನ್ನು ತಿಂದು ಪಡಬಾರದ ಪಾಡು ಪಡುತ್ತಿದ್ದಾನೆ.
ಅಷ್ಟಕ್ಕೂ ಈ ವ್ಯಕ್ತಿ ಹೀಗೆ ಹಸಿಹಸಿಯಾಗಿ ಏಡಿ ತಿನ್ನಲು ಕಾರಣ ಮಗಳ ಜತೆ ಜಗಳವಾಡಿಕೊಂಡಿದ್ದಕ್ಕಂತೆ. ಕೋಪದ ಕೈಗೆ ಬುದ್ಧಿ ಕೊಟ್ಟರೆ ಏನು ಬೇಕಾದರೂ ಆಗುತ್ತದೆ ಎನ್ನುವ ಮಾತಿಗೆ ಅನ್ವರ್ಥ ಎನ್ನುವಂತೆ ಈ ಘಟನೆ ಆಗಿದೆ. ಈ ಘಟನೆ ಆಗಿರುವುದು ಚೀನಾದಲ್ಲಿಯೇ. ವ್ಯಕ್ತಿಯೊಬ್ಬ ತನ್ನ ಮಗಳ ಮೇಲೆ ಸಿಟ್ಟು ಮಾಡಿಕೊಂಡು ಜೀವಂತ ಏಡಿಯನ್ನು ತಿಂದಿದ್ದಾನೆ!
ಹೀಗೆ ತಿನ್ನುತ್ತಿದ್ದಂತೆಯೇ ತೀವ್ರ ಅನಾರೋಗ್ಯಕ್ಕೆ ಒಳಗಾಗಿರುವ ಈ ವ್ಯಕ್ತಿಯ ಎದೆ, ಹೊಟ್ಟೆ, ಯಕೃತ್ತು ಮತ್ತು ಜೀರ್ಣಾಂಗದ ಭಾಗಗಳಿಗೆ ಸೋಂಕು ತಗುಲಿದ್ದು, ಇದೀಗ ಸಾವು – ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾನೆ. ಈತನನ್ನು ಪೂರ್ವ ಚೀನಾದ ಝೆಜಿಯಾಂಗ್‌ಗೆ ಸೇರಿದ 39 ವರ್ಷದ ಲು ಎಂದು ಗುರುತಿಸಲಾಗಿದೆ. ಈತನ ಸ್ಕ್ಯಾನಿಂಗ್ ಮಾಡಿದ ವೈದ್ಯರಿಗೆ ನಿಜಾಂಶವನ್ನು ಲು ಬಾಯಿ ಬಿಟ್ಟಿದ್ದಾನೆ. ಮಗಳ ಮೇಲಿನ ಸಿಟ್ಟಿಗೆ ಹೀಗೆ ಮಾಡಿರುವುದಾಗಿ ಹೇಳಿದ್ದಾನೆ.
ಒಟ್ಟಿನಲ್ಲಿ ಈಗ ಈತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈತನ ಸ್ಥಿತಿ ಗಂಭೀರವಾಗಿದ್ದು, ಶಸ್ತ್ರಚಿಕಿತ್ಸೆ ನಡೆಸುತ್ತಿದ್ದೇವೆ ಎಂದು ವೈದ್ಯರು ಹೇಳುತ್ತಿದ್ದಾರೆ. ಸದ್ಯ ಪ್ರಾಣಕ್ಕೆ ಅಪಾಯವಿಲ್ಲ, ಗುಣಮುಖವಾಗುವ ಸಾಧ್ಯತೆ ಇದೆ ಎಂದಿದ್ದಾರೆ.