ರಾಮನವಮಿ ಮೆರವಣಿಗೆ ವೇಳೆ ಆಯುಧ ಹಿಡಿದುಕೊಂಡಿದ್ದ ಆರೋಪದ ಮೇಲೆ 19 ವರ್ಷದ ಯುವಕನನ್ನು ಪಶ್ಚಿಮ ಬಂಗಾಳ ಪೊಲೀಸರು ಬಂಧಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಬಂದೂಕು ಹಿಡಿದಿದ್ದ ಸುಮಿತ್ ಶಾ ನನ್ನು ಇಂದು ಬಿಹಾರದ ಮುಂಗೇರ್‌ನಲ್ಲಿ ಬಂಧಿಸಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ರಾಮನವಮಿ ರ್ಯಾಲಿಯಲ್ಲಿ ಬಂದೂಕು ಹೊಂದಿದ್ದಾಗಿ ಸುಮಿತ್ ಶಾ ತಪ್ಪೊಪ್ಪಿಕೊಂಡಿದ್ದಾನೆ.
ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಯುವಕನೊಬ್ಬ ಬಂದೂಕು ಹಿಡಿದು ಧಾರ್ಮಿಕ ಮೆರವಣಿಗೆಯಲ್ಲಿ ಭಾಗಿಯಾಗಿದ್ದನ್ನ ತೋರಿಸುತ್ತದೆ.
ಅಭಿಷೇಕ್ ಬ್ಯಾನರ್ಜಿ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಬಿಜೆಪಿ, ಬಂಗಾಳದ ಹೌರಾದಲ್ಲಿ ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ರಾಮ ನವಮಿ ರ್ಯಾಲಿಯ ವೀಡಿಯೊ ಇದಲ್ಲ ಎಂದು ಹೇಳಿದೆ.
ರಾಮನವಮಿ ರ್ಯಾಲಿ ವೇಳೆ ಹೂಗ್ಲಿ ಮತ್ತು ಹೌರಾದಲ್ಲಿ ಕೋಮು ಘರ್ಷಣೆಗಳು ನಡೆದಿದ್ದವು. ಹೌರಾದಲ್ಲಿ ಎರಡು ಗುಂಪುಗಳ ಘರ್ಷಣೆಯ ನಂತರ ಕಳೆದ ವಾರ ಗುರುವಾರ ಹಲವಾರು ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು.
ಹಿಂಸಾಚಾರದ ಸಂದರ್ಭದಲ್ಲಿ ಹಲವಾರು ಅಂಗಡಿಗಳನ್ನು ಧ್ವಂಸಗೊಳಿಸಲಾಯಿತು ಮತ್ತು ಕೆಲವು ಪೊಲೀಸ್ ವಾಹನಗಳು ಸೇರಿದಂತೆ ಹಲವಾರು ಕಾರುಗಳಿಗೆ ಬೆಂಕಿ ಹಚ್ಚಲಾಯಿತು. ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಅಶ್ರುವಾಯು ಪ್ರಯೋಗಿಸಬೇಕಾಯಿತು.