ಮುಂಬಯಿಯ ವಿಲೇ ಪಾರ್ಲೆಯ ಹೊಟೇಲ್ ರೂಂ ಒಂದರಲ್ಲಿ ಗಾರ್ಮೆಂಟ್ ವ್ಯಾಪಾರಿಯೊಬ್ಬರು ಕೊಲೆಯಾದ 20 ವರ್ಷಗಳ ಬಳಿಕ ಆಪಾದಿತನನ್ನು ಪೊಲೀಸರು ಬಂಧಿಸಿದ್ದಾರೆ.
ಆಪಾದಿತ ರೂಪೇಶ್ ರೈ, 42, ಚಾಕುವಿನಿಂದ ವರ್ತಕನನ್ನು ಕೊಂದಿದ್ದು, ಅವರ ಬಳಿ ಇದ್ದ ಹಣ ದೋಚಿ ಪರಾರಿಯಾಗಿದ್ದ. ಬಳಿಕ ತನ್ನ ಹೆಸರನ್ನೇ ಬದಲಿಸಿಕೊಂಡ ಈತ, ಎಲ್ಲ ಸರ್ಕಾರೀ ದಾಖಲೆಗಳಲ್ಲಿದ್ದ ತನ್ನ ಹೆಸರನ್ನು ಬದಲಸಿಕೊಂಡಿದ್ದ. ಈ ಕಾರಣದಿಂದ ಆತನ ಬಂಧನ ಸಾಧ್ಯವಾಗಿರಲಿಲ್ಲ.
ಏಪ್ರಿಲ್ 3, 2003ರಲ್ಲಿ ಈ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೀಪಕ್ ರಾಥೋಡ್ ಎಂದು ಗುರುತಿಸಲಾದ ಗಾರ್ಮೆಂಟ್ ವರ್ತಕ ದೆಹಲಿಯಿಂದ ಮುಂಬಯಿಗೆ ಆಗಮಿಸಿದ್ದ ಸಂದರ್ಭದಲ್ಲಿ ತಮ್ಮೊಡನೆ 1.3 ಲಕ್ಷ ರೂಗಳನ್ನು ತಂದಿದ್ದರು.
ದೆಹಲಿಯಲ್ಲಿ ರೈಗೆ ಚಾಲನೆಯ ತರಬೇತಿ ನೀಡುತ್ತಿದ್ದ ರಾಥೋಡ್ ಆತನನ್ನು ತಮ್ಮೊಂದಿಗೆ ಮುಂಬಯಿಗೆ ಕರೆ ತಂದಿದ್ದರು. ಮಾರ್ಚ್ 31, 2003ರಲ್ಲಿ ಮುಂಬಯಿಗೆ ಆಗಮಿಸಿದ್ದ ರಾಥೋಡ್, ವಿಲೆ ಪಾರ್ಲೆ ರೈಲ್ವೇ ನಿಲ್ದಾಣದ ಬಳಿ ಹೋಟೆಲ್ ನೆಸ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದರು.
ಏಪ್ರಿಲ್ 3, 2003ರ ಬೆಳಿಗ್ಗೆ 10 ಗಂಟೆಯ ವೇಳೆ ರಾಥೋಡ್ ವಾಸ್ತವ್ಯ ಹೂಡಿದ್ದ ಕೋಣೆಗೆ ಆಗಮಿಸಿದ ರೂಂ ಸರ್ವಿಸ್ ಸಿಬ್ಬಂದಿ ಬಾಗಿಲು ತಟ್ಟಿದರೂ ಸಹ ಒಳಗಿಂದ ಯವುದೇ ಪ್ರತಿಕ್ರಿಯೆ ಬರಲಿಲ್ಲ. ಮಾಸ್ಟರ್ ಕೀ ಬಳಸಿ ತೆರೆದು ಕೋಣೆಯ ಒಳ ಸೇರಿದಾಗ ರಾಥೋಡ್ ಅವರ ಶವ ಪತ್ತೆಯಾಗಿದೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ರಾಥೋಡ್‌ರನ್ನು ಕಂಡ ಸಿಬ್ಬಂದಿ ಗಾಬರಿಗೊಂಡು ಪೊಲೀಸರನ್ನು ಸಂಪರ್ಕಿಸಿದ್ದಾರೆ. ಕೂಡಲೇ ಕೊಲೆ ಹಾಗೂ ಸಾಕ್ಷ್ಯ ನಾಶದ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯ ಪತ್ತೆಗೆ ಜಾಲ ಬೀಸಿದ್ದಾರೆ.
ರಾಥೋಡ್ ಜೊತೆಗೆ ರೂಂಗೆ ಚೆಕ್‌ಇನ್ ಆಗಿದ್ದ ರೈ ನಾಪತ್ತೆಯಾದ್ದರಿಂದ ಅನುಮಾನಗೊಂಡ ಪೊಲೀಸರು ಆತನ ಹುಡುಕಾಟ ಆರಂಭಿಸಿದ್ದಾರೆ. ಬಿಹಾರದಲ್ಲಿರುವ ರೈ ಸ್ವಂತ ಊರಿಗೂ ಭೇಟಿ ಕೊಟ್ಟಿದ್ದ ಪೊಲೀಸರಿಗೆ ಆತನ ಪತ್ತೆಗೆ ಆತನ ಸಂಬಂಧಿಕರು ಯಾವುದೇ ಪ್ರೋತ್ಸಾಹ ನೀಡಲಿಲ್ಲ.
ಇತ್ತೀಚಿನ ದಿನಗಳಲ್ಲಿ ರೈನ ಊರಿಗೆ ಪದೇ ಪದೇ ಭೇಟಿ ಕೊಟ್ಟ ಪೊಲೀಸರು ಆತನ ಸ್ನೇಹಿತರು, ಸಂಬಂಧಿಕರು, ನೆರೆಹೊರೆಯವರು ಹಾಗೂ ಹೆತ್ತವರ ದೂರವಾಣಿ ಸಂಖ್ಯೆಗಳನ್ನು ನೋಟ್ ಮಾಡಿಕೊಂಡಿದ್ದಾರೆ.
ಈ ಎಲ್ಲಾ ದೂರವಾಣಿ ಸಂಖ್ಯೆಗಳಿಗೆ ಬಂದು ಕರೆ ವಿವರಗಳನ್ನು ಪರಿಶೀಲನೆ ಮಾಡಿದ ಪೊಲೀಸರಿಗೆ, ಆ ಎಲ್ಲಾ ಸಂಖ್ಯೆಗಳಿಗೆ ಒಂದು ಸಾಮಾನ್ಯ ಸಂಖ್ಯೆಯಿಂದ ಕರೆ ಬಂದಿರುವುದು ಕಂಡು ಬಂದು ಅದರ ಜಾಡು ಹಿಡಿದಿದ್ಧಾರೆ. ಈ ಸಂಖ್ಯೆ ತಾವು 20 ವರ್ಷಗಳಿಂದ ಹುಡುಕುತ್ತಿರುವ ವ್ಯಕ್ತಿಯದ್ದೇ ಆಗಿದೆ ಎಂದು ಪೊಲೀಸರಿಗೆ ಖಾತ್ರಿಯಾಗಿದೆ.
ಇದರ ಬೆನ್ನತ್ತಿ ಥಾಣೆಯಲ್ಲಿದ್ದ ಸಿಹಿತಿನಿಸುಗಳ ಅಂಗಡಿಯೊಂದರಕ್ಕೆ ಸಾಂಟಾ ಕ್ರೂಜ಼್ ಪೊಲೀಸರ ತಂಡವೊಂದು ರೇಡ್ ಮಾಡಿ ರೈನನ್ನು ಬಂಧಿಸಿದೆ.
ತನ್ನ ತಪ್ಪೊಪ್ಪಿಕೊಂಡಿರುವ ರೈ, 1.3 ಲಕ್ಷ ರೂಗಾಗಿ ರಾಥೋಡ್‌ರನ್ನು ಕೊಂದಿದ್ದು, ಇದಾದ ಬಳಿಕ ಗೋವಾ, ಜಾರ್ಖಂಡ್ ಎಂದೆಲ್ಲಾ ಅಲೆದಾಡಿದ ರೈ ಕೊನೆಗೆ ಥಾಣೆಯಲ್ಲಿ ಬಂದು ನೆಲೆಸಿದ್ದ.