ನಿಮ್ಮ ಬಾಲ್ಯದಲ್ಲಿರಬೇಕಿದ್ರೆ ಎಂದಾದ್ರೂ ದಾರಿಯಲ್ಲಿ ನೋಟು ಸಿಕ್ಕಿದ್ರೆ ಏನು ಮಾಡ್ತಿರುತ್ತೀರಾ..? ಬಹುಶಃ ಅದನ್ನು ಹೆಕ್ಕಿರುತ್ತೀರಿ ಅಲ್ವಾ..? ಆ ಕ್ಷಣದ ಖುಷಿಯೇ ಅಂಥದ್ದು….. ಇದೀಗ ಇಂಥದ್ದೇ ಒಂದು ಸ್ಕ್ರಿಪ್ಟ್ ಮಾಡಿದ ವಿಡಿಯೋ ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಉಲ್ಲಾಸದಿಂದ ಪ್ರತಿಕ್ರಿಯಿಸಿದ್ದಾರೆ.
ಹಣ ಕಂಡ್ರೆ ಹೆಣವೂ ಬಾಯಿ ಬಿಡುತ್ತದೆ ಎಂಬ ಮಾತು ಸುಳ್ಳಲ್ಲ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ, ಕೆಫೆ ಬಳಿ ನಿಲ್ಲಿಸಿದ್ದ ಕಾರಿನ ಟೈರ್ ಅಡಿಯಲ್ಲಿ ನೋಟು ಸಿಕ್ಕಿಹಾಕಿಕೊಂಡಿದೆ. ಇದನ್ನು ಕಂಡು ವ್ಯಕ್ತಿಯೊಬ್ಬರು ತನ್ನ ಅದೃಷ್ಟದ ದಿನ ಎಂದು ಭಾವಿಸಿ, ಹಣವನ್ನು ಪಡೆಯಲು ಪ್ರಯತ್ನಿಸಿದ್ದಾರೆ. ಆದರೆ ಟೈರ್ ಅಡಿಗೆ ಹಣ ಸಿಲುಕಿದ್ದರಿಂದ ಅದನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಬೇರೆ ಜನರಿಗೆ ಗೊತ್ತಾಗದ ರೀತಿಯಲ್ಲಿ ಶೂ ಲೇಸ್ ಕಟ್ಟುವಂತೆ ನಟಿಸಿ ನೋಟು ಎತ್ತಿಕೊಳ್ಳಲು ಮುಂದಾಗುತ್ತಾನೆ. ಆದರೂ ಕೂಡ ಸಾಧ್ಯವಾಗಿಲ್ಲ.
ಇನ್ನು ಸುತ್ತಾ ಜನ ನೋಡಿದ್ರೆ ತನ್ನ ಮರ್ಯಾದೆ ಹೋಗುತ್ತದೆ ಎಂದು ಭಾವಿಸಿ ಅನುಮಾನ ಬಾರದಂತೆ ನೋಟು ಪಡೆಯಲು ಪ್ರಯತ್ನಿಸುತ್ತಾನೆ. ಕಾರು ತಳ್ಳುತ್ತಾನೆ, ಆದ್ರೂ ಪ್ರಯೋಜನವಿಲ್ಲ. ಇನ್ನೇನು ಮಾಡುವುದು ಕಾರು ಮಾಲೀಕ ಬರೋವರೆಗೆ ಕಾಯಬೇಕು ಅಷ್ಟೇ. ಅದಕ್ಕಾಗಿ ಅಲ್ಲೇ ಎದುರುಗಡೆ ಇದ್ದ ಕೆಫೆ ಬಳಿ ಹೋಗಿ ಕುಳಿತುಕೊಳ್ಳುತ್ತಾನೆ.
ಕೆಫೆಯಲ್ಲಿ ಕುಳಿತರೂ ಆ ವ್ಯಕ್ತಿಗೆ ನೋಟಿನದ್ದೇ ಚಿಂತೆ. ಯಾರಾದ್ರೂ ಎತ್ತಿಕೊಂಡು ಹೋದ್ರೆ ಅಂತಾ…..! ಸೂಕ್ಷ್ಮವಾಗಿ ಗಮನಿಸುತ್ತಲೇ ಇರುತ್ತಾನೆ. ಕೊನೆಗೆ ಕಾರಿನ ಚಾಲಕ ಬಂದು ಕಾರು ಚಲಾಯಿಸುತ್ತಾನೆ. ಇದನ್ನು ನೋಡಿದ ಕೂಡಲೇ ಇನ್ನೇನು ತನ್ನ ಆಸನದಿಂದ ಎದ್ದೇಳಬೇಕು ಎಂದು ಅಂದುಕೊಂಡಾಗ ಕೆಫೆಯಲ್ಲಿ ಕುಳಿತಿದ್ದವರೆಲ್ಲರೂ ಆ ಸ್ಥಳಕ್ಕೆ ಓಡಿದ್ದಾರೆ. ಅಂದ್ರೆ, ಅಷ್ಟೂ ಜನ ಅಲ್ಲಿ ಕೆಫೆಯಲ್ಲಿ ಕುಳಿತಿದ್ದಿದ್ದು ಆ ಒಂದು ನೋಟಿಗಾಗಿ..!
ಈ ಕ್ರೇಜಿ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 2.34 ಲಕ್ಷಕ್ಕೂ ಹೆಚ್ಚು ಲೈಕ್ಸ್ ಗಳನ್ನು ಗಳಿಸಿದೆ. ಹಲವರು ಆ ವ್ಯಕ್ತಿಯ ದುರಾದೃಷ್ಟವನ್ನು ಹೋಲಿಸಿ ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವು ಬಳಕೆದಾರರು ಇದು ಕೆಫೆ ಮಾಲೀಕರ ವ್ಯವಹಾರ ಟ್ರಿಕ್ ಆಗಿರಬಹುದು ಎಂದು ತಮಾಷೆ ಮಾಡಿದ್ದಾರೆ.
https://youtu.be/3qDme1WOYz4