ಪತಿಯಿಂದ ಮಾನಸಿಕವಾಗಿ ದೌರ್ಜನ್ಯವನ್ನು ಎದುರಿಸುತ್ತಿದ್ದ ಪತ್ನಿಗೆ ವಿವಾಹ ಸಂಬಂಧದಿಂದ ದೆಹಲಿ ಹೈಕೋರ್ಟ್ ಮುಕ್ತಿ ನೀಡಿದೆ. ಪತಿಯು ಪತ್ನಿಯನ್ನು ಹಣದ ಆಸೆಗಾಗಿ ಮಾತ್ರ ಬಯಸಿದ್ದಾನೆ. ಆಕೆಗೆ ದೆಹಲಿ ಪೊಲೀಸ್ ಇಲಾಖೆಯಲ್ಲಿ ಕೆಲಸ ಸಿಕ್ಕ ಬಳಿಕ ಆಕೆಯ ಹಣದ ಬಗ್ಗೆ ಮಾತ್ರ ಆಸೆ ಹೊಂದಿದ್ದ ಎಂದು ಹೇಳಿದೆ.
ನ್ಯಾಯಮೂರ್ತಿ ವಿಪಿನ್ ಸಾಂಘಿ ನೇತೃತ್ವದ ಪೀಠ ಯಾವುದೇ ಭಾವನಾತ್ಮಕ ಸೆಳೆತವೇ ಇಲ್ಲದ ಪತಿಯ ಸಂಬಂಧವು ಮಹಿಳೆಗೆ ಮಾನಸಿಕ ಯಾತನೆಯನ್ನು ನೀಡುತ್ತದೆ. ಇದರಿಂದ ಆಕೆಗೆ ಹಿಂಸೆಯಾಗುತ್ತದೆ ಎಂದು ಹೇಳಿದೆ.
ನ್ಯಾಯಪೀಠದಲ್ಲಿದ್ದ ಜಸ್ಮೀತ್ ಸಿಂಗ್, ಮದುವೆಯಾದ ಪ್ರತಿಯೊಬ್ಬ ಹೆಣ್ಣಿಗೂ ಕುಟುಂಬವನ್ನು ನೋಡಿಕೊಳ್ಳಬೇಕೆಂಬ ಆಸೆ ಇರುತ್ತದೆ. ಆದರೆ ಈ ಪ್ರಕರಣದಲ್ಲಿ ಪತಿಯು ಪತ್ನಿಯ ಜೊತೆ ಯಾವುದೇ ಭಾವನಾತ್ಮಕ ಸಂಬಂಧ ಹೊಂದಿಲ್ಲ ಕೇವಲ ಆಕೆಯ ಆದಾಯದ ಮೇಲೆ ಆಸಕ್ತಿ ಹೊಂದಿದ್ದ ಎಂದು ಹೇಳಿದೆ.
ವಿಚ್ಛೇದನಕ್ಕೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ತಳ್ಳಿ ಹಾಕಿದ ದೆಹಲಿ ಹೈಕೋರ್ಟ್, ಹಿಂದೂ ವಿವಾಹ ಕಾಯ್ದೆಯಡಿಯಲ್ಲಿ ದಂಪತಿಗೆ ವಿಚ್ಛೇದನ ನೀಡಿದೆ.
ನಿರುದ್ಯೋಗಿಯಾಗಿದ್ದ ಪತಿಯು ಮದ್ಯವ್ಯಸನಿಯಾಗಿದ್ದು ತನಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಿಂಸೆ ನೀಡಿ ಹಣಕ್ಕೆ ಬೇಡಿಕೆ ಇಡುತ್ತಾನೆ. ಹೀಗಾಗಿ ತನಗೆ ಈ ವಿವಾಹ ಸಂಬಂಧದಿಂದ ವಿಚ್ಛೇದನ ಬೇಕೆಂದು ಪತ್ನಿ ಕೋರ್ಟ್ ಮೊರೆಹೋಗಿದ್ದರು.
ಪತಿ – ಪತ್ನಿ ಇಬ್ಬರೂ ಬಡ ಕುಟುಂಬಕ್ಕೆ ಸೇರಿದವರಾಗಿದ್ದು, ಪತಿ ಹಾಗೂ ಪತ್ನಿ ಕ್ರಮವಾಗಿ 19 ಹಾಗೂ 13 ವರ್ಷದವರಿದ್ದಾಗ ವೈವಾಹಿಕ ಸಂಬಂಧಕ್ಕೆ ಕಾಲಿಟ್ಟಿದ್ದರು. 2005ರಲ್ಲಿ ಇವರಿಗೆ ಮದುವೆಯಾಗಿದ್ದರೂ 2014ರವರೆಗೂ ಆತ ಆಕೆಯನ್ನು ಪತಿಯ ಮನೆಗೆ ಕರೆದುಕೊಂಡು ಹೋಗಿರಲಿಲ್ಲ. ಆಕೆಗೆ ದೆಹಲಿ ಪೊಲೀಸ್ ಇಲಾಖೆಯಲ್ಲಿ ಕೆಲಸ ಸಿಕ್ಕ ಬಳಿಕ ಪತಿಯ ಮನೆಗೆ ಕರೆದುಕೊಂಡು ಹೋಗಲಾಗಿತ್ತು.
ಅರ್ಜಿದಾರ ಮಹಿಳೆಯು ಅಪ್ರಾಪ್ತ ವಯಸ್ಸು ದಾಟಿದ ಬಳಿಕವೂ ಇವರಿಬ್ಬರ ನಡುವೆ ಯಾವುದೇ ಭಾವನಾತ್ಮಕ ಸಂಬಂಧ ಇರಲಿಲ್ಲ. ಪತ್ನಿಯ ಆದಾಯದ ಮೇಲೆ ಕಣ್ಣಿಟ್ಟಿದ್ದ ಪತಿ ಆಕೆಗೆ ಕಿರುಕುಳ ನೀಡುತ್ತಿದ್ದನ್ನು ಗಮನಿಸಿದ ಕೋರ್ಟ್ ಈ ಆದೇಶ ನೀಡಿದೆ.