ಬ್ಯಾಂಕ್ ಸಾಲ ಪಡೆದು ಬೈಕ್ ಖರೀದಿಸಿದ್ದವನೊಬ್ಬ ಸಕಾಲಕ್ಕೆ ಕಂತು ಪಾವತಿಸದೆ ಬಳಿಕ ಲೋನ್ ರಿಕವರಿ ಏಜೆಂಟ್ ಗಳಿಂದ ಪಾರಾಗಲು ತನ್ನ ಬೈಕಿಗೆ ನಕಲಿ ನಂಬರ್ ಪ್ಲೇಟ್ ಹಾಕಿಕೊಂಡಿದ್ದು, ಇದೀಗ ಸಿಕ್ಕಿ ಬಿದ್ದಿದ್ದಾನೆ. ಇಂತಹದೊಂದು ಘಟನೆ ಮುಂಬೈನಲ್ಲಿ ನಡೆದಿದೆ.
ಸಾಲ ಮಾಡಿ ಬೈಕ್ ಖರೀದಿಸಿದ್ದ ಈ ವ್ಯಕ್ತಿ ಲೋನ್ ರಿಕವರಿ ಏಜೆಂಟ್ ಗಳನ್ನು ಇದುವರೆಗೂ ಹೇಗೋ ಯಾಮಾರಿಸಿಕೊಂಡು ಬಂದಿದ್ದು ಬುಧವಾರದಂದು ತನ್ನ ಬೈಕನ್ನು ರಾಮಚಂದ್ರ ಭಟ್ ಮಾರ್ಗದಲ್ಲಿರುವ ನೋ ಪಾರ್ಕಿಂಗ್ ಏರಿಯಾದಲ್ಲಿ ನಿಲ್ಲಿಸಿದ್ದ. ಆಗ ಟ್ರಾಫಿಕ್ ಪೇದೆ ವಿಷ್ಣು ಗಾವಿತ್ ಅಲ್ಲಿಗೆ ಬಂದಿದ್ದಾರೆ.
ತಮ್ಮ ಈ ಚಲನ್ ಮಷೀನ್ ನಲ್ಲಿ ಬೈಕ್ ನಂಬರ್ ನಮೂದಿಸಿದಾಗ ಬೇರೆ ಬೈಕಿನ ಮಾಹಿತಿ ಅದರಲ್ಲಿ ಬಂದಿದೆ. ಅನುಮಾನಗೊಂಡ ಅವರು ಬೈಕ್ ಠಾಣೆಗೆ ತೆಗೆದುಕೊಂಡು ಹೋಗಲು ಮುಂದಾಗಿದ್ದು, ಆಗ ಅಲ್ಲಿಗೆ ಬಂದ ಮಾಲೀಕ ವಾದ ಆರಂಭಿಸಿದ್ದಾನೆ.
ನಂತರ ಪೇದೆ ವಿಷ್ಣು ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಬೈಕ್ ಸಮೇತ ಮಾಲೀಕನನ್ನು ಕರೆದುಕೊಂಡು ಹೋಗಿ ವಿಚಾರಣೆ ಆರಂಭಿಸಿದ್ದಾರೆ. ಈ ಸಂದರ್ಭದಲ್ಲಿ ಆರೋಪಿ ತನ್ನ ತಪ್ಪೊಪ್ಪಿಕೊಂಡಿದ್ದು, ರಿಕವರಿ ಏಜೆಂಟ್ ಗಳಿಂದ ಪಾರಾಗಲು ಈ ಮಾರ್ಗ ಅನುಸರಿಸಿದ್ದಾಗಿ ಹೇಳಿದ್ದಾನೆ. ಇದೀಗ ಆತನ ವಿರುದ್ಧ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ.