ವಿಮಾನ ನಿಲ್ದಾಣದಲ್ಲಿ ಕಳೆದುಕೊಂಡ ಲಗೇಜ್ ಬ್ಯಾಗ್ ನ ಟ್ರ್ಯಾಕ್ ಮಾಡಿದಾಗ ಬ್ಯಾಗ್ ನಲ್ಲಿದ್ದ ಬಟ್ಟೆಗಳನ್ನ ಕಳ್ಳ ಧರಿಸಿರೋದನ್ನ ಕಂಡ ವ್ಯಕ್ತಿ ಆಘಾತಕ್ಕೊಳಗಾಗಿದ್ದಾರೆ.
ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ ಅಮೆರಿಕಾದ ವಿಮಾನ ನಿಲ್ದಾಣದಲ್ಲಿ ತನ್ನ ಬ್ಯಾಗ್ ಕಳೆದುಕೊಂಡ ವ್ಯಕ್ತಿಯೊಬ್ಬರು ಆಪಲ್‌ನ ಏರ್‌ಟ್ಯಾಗ್ ಬಳಸಿ ಸೂಟ್‌ಕೇಸ್ ಅನ್ನು ಟ್ರ್ಯಾಕ್ ಮಾಡಿದಾಗ ಕಳ್ಳನು ವ್ಯಕ್ತಿಯ ಬಟ್ಟೆಗಳನ್ನು ಧರಿಸಿರೋದು ಪತ್ತೆಯಾಗಿದೆ.
ಜಮೀಲ್ ರೀಡ್ ಅವರು ಲಾಸ್ ಏಂಜಲೀಸ್‌ನಿಂದ ಜಾರ್ಜಿಯಾದ ಅಟ್ಲಾಂಟಾಗೆ ಪ್ರಯಾಣಿಸುತ್ತಿದ್ದಾಗ ತಮ್ಮ ಬ್ಯಾಗೇಜ್ ಕಾಣೆಯಾಗಿರೋದನ್ನ ಕಂಡುಕೊಂಡರು. ಅರ್ಧ ಗಂಟೆ ಕಳೆದರೂ ಲಗೇಜ್ ಬ್ಯಾಗ್ ಸಿಗದಿದ್ದಾಗ ಯಾರೋ ಅದನ್ನು ತೆಗೆದುಕೊಂಡು ಹೋಗಿರಬೇಕು ಎಂದು ಸ್ಪಷ್ಟವಾಯಿತು. ಅವರ ಪ್ರಕಾರ ಅವರ ಬ್ಯಾಗ್‌ನಲ್ಲಿ ಸುಮಾರು 3,000 ಡಾಲರ್ (2.4 ಲಕ್ಷ ರೂ.) ಮೌಲ್ಯದ ವಸ್ತುಗಳು ಇದ್ದವು.
ಲಗೇಜ್ ಕಳೆದುಕೊಂಡ ಪ್ರಯಾಣಿಕನಿಗೆ ತನ್ನ ಬ್ಯಾಗ್‌ನಲ್ಲಿರುವ ಟ್ರ್ಯಾಕಿಂಗ್ ಸಾಧನದಿಂದ ಬ್ಯಾಗ್ ಆಗಲೇ ವಿಮಾನ ನಿಲ್ದಾಣದಿಂದ ಹೊರಬಂದಿದೆ ಎಂದು ಸೂಚಿಸಿದರೂ, ಅದು ಥಟ್ಟನೆ ತನ್ನ ಕಡೆಗೆ ಚಲಿಸುತ್ತಿರುವುದನ್ನು ಗಮನಿಸಿದಾಗ ಅವರು ತಕ್ಷಣ ಪೊಲೀಸರಿಗೆ ಕರೆ ಮಾಡಿದ್ದಾರೆ.
ಸೂಟ್‌ಕೇಸ್ ಅನ್ನು ವಿಮಾನ ನಿಲ್ದಾಣಕ್ಕೆ ಹಿಂತಿರುಗುವವರೆಗೂ ಹಿಂಬಾಲಿಸಿದ್ದು, ಈ ವೇಳೆ ನಿರಾಶ್ರಿತ ನೆಲ್ಸನ್ ಎಂಬ ವ್ಯಕ್ತಿ ಲಗೇಜ್ ಹೊತ್ತುಕೊಂಡು ಹೋಗಿದ್ದು ಪತ್ತೆಯಾಗಿದೆ. ಪ್ರವೃತ್ತಿಯಲ್ಲಿ ಕಳ್ಳನಾಗಿದ್ದ ನೆಲ್ಸನ್ ಕೈಗೆ ಪೊಲೀಸರು ಅಂತಿಮವಾಗಿ ಕೋಳ ತೊಡಿಸಿ ಕರೆದೊಯ್ದರು.