ಪುರಿ: ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಖಾಸಗಿ ಕಾರ್ಯದರ್ಶಿ ವಿ.ಕೆ. ಪಾಂಡಿಯನ್ ಮತ್ತು ಪುರಿ ಜಿಲ್ಲಾಧಿಕಾರಿ ಸಮರ್ಥ್ ವರ್ಮಾ ಮೇಲೆ ವ್ಯಕ್ತಿಯೊಬ್ಬ ಶನಿವಾರ ಸತ್ಯಬಾದಿ ಪ್ರದೇಶದಲ್ಲಿ ಶಾಯಿ ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪುರಿ ಜಿಲ್ಲೆಯ ಸತ್ಯಬಾದಿ ಪ್ರದೇಶದ ಉತ್ಕಲಮಣಿ ಗೋಪಬಂಧು ಸ್ಮೃತಿ ಮಹಾವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ 2000ನೇ ಬ್ಯಾಚ್ನ ಐಎಎಸ್ ಅಧಿಕಾರಿ ಪಾಂಡಿಯನ್ ಭಾಗಿಯಾಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಐಎಎಸ್ ಅಧಿಕಾರಿಗಳ ಮೇಲೆ ಮಸಿ ಎರಚಿದ ವ್ಯಕ್ತಿಯನ್ನು ಜಿಲ್ಲೆಯ ಸತ್ಯಬಾಡಿ ವಿಧಾನಸಭಾ ಕ್ಷೇತ್ರದ ಕನಾಸ್ ಬ್ಲಾಕ್ ವ್ಯಾಪ್ತಿಯ ಹರಿಪುರ ಗ್ರಾಮದ ನಿವಾಸಿ ಭಾಸ್ಕರ್ ಸಾಹೂ ಎಂದು ಗುರುತಿಸಲಾಗಿದೆ.
ಪೊಲೀಸರು ಸಾಹೂ ಅವರನ್ನು ಬಂಧಿಸಿದರು. ಶಾಯಿ ದಾಳಿಯಾದ ತಕ್ಷಣ ಪಾಂಡಿಯನ್ ಶಾಯಿ ಬಳಿದ ಬಿಳಿ ಅಂಗಿಯನ್ನು ಧರಿಸಿ ಜನರನ್ನು ಭೇಟಿಯಾಗಿ ಅವರ ಕುಂದುಕೊರತೆಗಳನ್ನು ಸ್ವೀಕರಿಸಿದರು.
ಸತ್ಯಬಾಡಿಯ ಬಿಜೆಡಿ ಶಾಸಕ ಉಮಾಕಾಂತ ಸಾಮಂತರಾಯರು ಸಾಹೂ ಬಿಜೆಪಿಯ ವ್ಯಕ್ತಿ ಎಂದು ಆರೋಪಿಸಿದ್ದು, ರಾಜಕೀಯ ಉದ್ದೇಶದಿಂದ ಪಾಂಡಿಯನ್ ಅವರನ್ನು ಗುರಿಯಾಗಿಸಿಕೊಂಡು ಮಸಿ ಎರಚಿದರು ಎಂದು ದೂರಿದ್ದಾರೆ.
ಬಿಜೆಪಿಯು ಸಾಮಂತರಾಯರ ಆರೋಪಗಳನ್ನು ತಳ್ಳಿಹಾಕಿದ್ದು, ಕೇಸರಿ ಪಕ್ಷವು ಶಾಯಿ ದಾಳಿಯನ್ನು ಒಪ್ಪುವುದಿಲ್ಲ ಎಂದು ಹೇಳಿದೆ.