ಪತ್ನಿಯೊಂದಿಗೆ ಜಗಳವಾಡಿದ ವ್ಯಕ್ತಿ 30 ಅಡಿ ಎತ್ತರದ ಸೇತುವೆಯಿಂದ ಕಾಲುವೆಗೆ ನಾಲ್ಕು ಮಕ್ಕಳನ್ನು ಎಸೆದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಮಕ್ಕಳನ್ನು ನದಿಗೆ ತಳ್ಳಿದ ಆರೋಪದ ಮೇಲೆ 35 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ.
ನದಿಗೆ ಬಿದ್ದ ನಾಲ್ಕು ಮಕ್ಕಳ ಪೈಕಿ 12 ವರ್ಷದ ಬಾಲಕಿ ಸುರಕ್ಷಿತವಾಗಿ ಈಜಿ ದಡ ಸೇರುವುದರ ಜೊತೆಗೆ ತನ್ನ ಇಬ್ಬರು ಒಡಹುಟ್ಟಿದವರನ್ನ ರಕ್ಷಿಸಿದ್ದಾಳೆ. ಆದರೆ ಓರ್ವ ಮಗು ನೀರಲ್ಲಿ ಕೊಚ್ಚಿಹೋಗಿದ್ದು ನಾಪತ್ತೆಯಾಗಿದೆ. ಕಸ್ಗಂಜ್ ಜಿಲ್ಲೆಯ ಸಹವರ್ ಪೊಲೀಸ್ ವ್ಯಾಪ್ತಿಯ ಶೇಖಪುರ್ ಹುಂಡಾದಲ್ಲಿ ಈ ಘಟನೆ ನಡೆದಿದೆ.
ಆರೋಪಿ ಪುಷ್ಪೇಂದ್ರ ಕುಮಾರ್ ಸೋಮವಾರ ಕೌಟುಂಬಿಕ ಕಲಹದ ನಂತರ ಗ್ರಾಮದಿಂದ 15 ಕಿಮೀ ದೂರದಲ್ಲಿರುವ ತವರುಮನೆಗೆ ತನ್ನ ಪತ್ನಿಯನ್ನು ಬಿಡಲು ಹೋಗಿದ್ದ. ಅಲ್ಲಿಂದ ಹಿಂತಿರುಗಿದ ಬಳಿಕ ಕುಮಾರ್ ತನ್ನ ಮಕ್ಕಳನ್ನು ಹತ್ತಿರದ ಜಾತ್ರೆಗೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದ. ಆದರೆ ದಾರಿಯಲ್ಲಿ ಸೇತುವೆಯ ಬಳಿ ನಿಲ್ಲಿಸಿ ತನ್ನ ನಾಲ್ವರು ಮಕ್ಕಳಾದ ಸೋನು (13), ಪ್ರಭಾ (12), ಕಾಜಲ್ (8) ಮತ್ತು ಹೇಮಲತಾ (5) ಅವರನ್ನು 15 ಅಡಿ ಆಳದ ಕಾಲುವೆಗೆ ತಳ್ಳಿದ್ದ.
ನಂತರ ನಡೆದ ಘಟನೆ ಪ್ರಭಾಳರ ಧೈರ್ಯ ಮತ್ತು ಸಾಹಸಕ್ಕೆ ಸಾಕ್ಷಿಯಾಗಿತ್ತು. ಆಕೆ ಈಜುವುದು ಮಾತ್ರವಲ್ಲದೆ ತನ್ನ ಕಿರಿಯ ಸಹೋದರನ ಕೈಯನ್ನು ಬಿಗಿಯಾಗಿ ಹಿಡಿದುಕೊಂಡು ತನ್ನ ಸಹೋದರಿ ಕಾಜಲ್ ಅನ್ನು ಸುರಕ್ಷಿತವಾಗಿ ದಡಕ್ಕೆ ಕರೆತಂದಿದ್ದಳು.
ಮೂವರೂ ಮಕ್ಕಳ ಸ್ಥಿತಿ ಸ್ಥಿರವಾಗಿದ್ದು, ನಾಪತ್ತೆಯಾಗಿರುವ ಕಿರಿಯ ಮಗು ಹೇಮಲತಾ ಪತ್ತೆಗೆ ಈಜುಗಾರರನ್ನು ನಿಯೋಜಿಸಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ದೂರಿನ ಆಧಾರದ ಮೇಲೆ ಪುಷ್ಪೇಂದ್ರ ವಿರುದ್ಧ ಐಪಿಸಿ ಸೆಕ್ಷನ್ 363 (ಅಪಹರಣ) ಮತ್ತು 307 (ಕೊಲೆ ಯತ್ನ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ತನಿಖೆಯ ಸಮಯದಲ್ಲಿ, ಆರೋಪಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದು ಮದ್ಯದ ಅಮಲಿನಲ್ಲಿ ಕೃತ್ಯ ಮಾಡಿರುವುದಾಗಿ ಹೇಳಿದ್ದಾನೆ.