ಬ್ರಿಟನ್ನಲ್ಲಿ 46 ವರ್ಷದ ವ್ಯಕ್ತಿಯೊಬ್ಬ ಮಾನಸಿಕ ಅಸ್ವಸ್ಥರ ಚಾರಿಟಿಗಾಗಿ ಹಣ ಸಂಗ್ರಹಿಸಲು ಕಳೆದ ಅನೇಕ ವರ್ಷಗಳಿಂದ ತಮ್ಮ ಮನೆಯ ಮುಂದೆ ದೀಪಾಲಂಕಾರದ ಪ್ರದರ್ಶನವನ್ನ ಏರ್ಪಡಿಸುತ್ತಾ ಬಂದಿದ್ದಾರೆ.
ಇಂಗ್ಲೆಂಡ್ನ ಚೆಸ್ಲಿನ್ ಹೇ ಎಂಬ ಪ್ರದೇಶದ ನಿವಾಸಿ ಟ್ರೆವೊರ್ ಪಾಯ್ನೆ ತಮ್ಮ ಮನೆಯ ಮುಂದೆ ವಿವಿಧ ಅಲಂಕಾರದ ದೀಪಗಳನ್ನ ಪ್ರದರ್ಶಿಸುವ ಮೂಲಕ ದೇಣಿಗೆ ಸಂಗ್ರಹಿಸುತ್ತಿದ್ದರು. ಆದರೆ ಈಗ ಅವರು ತಮ್ಮ ಈ ಕೆಲಸವನ್ನ ನಿಲ್ಲಿಸಬೇಕಾದ ಅನಿವಾರ್ಯತೆ ಬಂದೆರಗಿದೆ.
ಸ್ಥಳೀಯ ಮಾಧ್ಯಮಗಳು ನೀಡಿರುವ ವರದಿ ಪ್ರಕಾರ ಇಲ್ಲಿನ ಪೊಲೀಸರು ಪಾಯ್ನೆಗೆ ದೀಪಗಳನ್ನ ಬಂದ್ ಮಾಡು ಇಲ್ಲವೇ 9.8 ಲಕ್ಷ ರೂಪಾಯಿ ದಂಡ ಪಾವತಿಸಲು ರೆಡಿಯಾಗು ಎಂದು ಎಚ್ಚರಿಕೆ ರವಾನಿಸಿದ್ದಾರಂತೆ.
ಗಾಢ ಬಣ್ಣದ ದೀಪಾಲಂಕಾರ ನೋಡೋಕೆ ಪಾಯ್ನೆ ನಿವಾಸದಲ್ಲಿ ಜನಸಂದಣಿಯಾಗಿದೆ ಎಂಬ ದೂರನ್ನ ಕೇಳಿದ ಬಳಿಕ ಪಾಯ್ನೆ ನಿವಾಸಕ್ಕೆ ಶನಿವಾರ ರಾತ್ರಿ ಪೊಲೀಸರು ಆಗಮಿಸಿದ್ದರು. ಹಾಗೂ ದೀಪಗಳನ್ನ ಬಂದ್ ಮಾಡುವಂತೆ ಆದೇಶವನ್ನೂ ನೀಡಿದ್ದಾರೆ. ಕೊರೊನಾ ಮಾರ್ಗಸೂಚಿಯಿಂದಾಗಿ ಪಾಯ್ನೆ ಸಾಮಾಜಿಕ ಕಲ್ಯಾಣ ಕಾರ್ಯಕ್ಕೆ ಕುತ್ತು ಬಂದಿದೆ.
ಆದರೆ ಈ ದೀಪಾಲಂಕಾರ ಪ್ರದರ್ಶನಕ್ಕೆ ಬಂದಿದ್ದ ಪ್ರತಿಯೊಬ್ಬರು ಮಾಸ್ಕ್ ಹಾಗೂ ಸಾಮಾಜಿಕ ಅಂತರವನ್ನ ಕಾಪಾಡಿದ್ದರು. ಇಂತಹ ಒಳ್ಳೆಯ ಪ್ರದರ್ಶನ ಬಂದ್ ಮಾಡಿದ್ದಕ್ಕೆ ಬೇಸರವಾಗಿದೆ ಅಂತಾ ಸಂದರ್ಶಕರೊಬ್ಬರು ಹೇಳಿದ್ದಾರೆ.