ಸಾಮಾಜಿಕ ಜಾಲತಾಣದಲ್ಲಿ ಮಾಡುವ ಪೋಸ್ಟ್‌ಗಳಿಗೆ ಬರುವ ಲೈಕ್ಸ್ ಹಾಗೂ ಕಾಮೆಂಟುಗಳ ಸಂಬಂಧ ತಮ್ಮ ಪ್ರತಿಷ್ಠೆಗಳನ್ನು ಬೆಸೆಯುವ ಅನೇಕ ಮಂದಿಯನ್ನು ನೋಡಿದ್ದೇವೆ. ಇಂಥದ್ದೇ ಕಾರಣವೊಂದಕ್ಕೆ ಪತಿಯ ಮೇಲೆ ಉರಿದುಬಿದ್ದ ಪತ್ನಿ, ತನ್ನ ಪತಿ ಹಾಕುವ ಪೋಸ್ಟ್‌ಗಳಿಗೆ ಬರುವ ಲೈಕ್ಸ್ ಹಾಗೂ ಕಾಮೆಂಟುಗಳ ಸಂಬಂಧ ಪ್ರಶ್ನಿಸಿದ್ದು,ಹೊಡೆದಾಟವಾಗಿ ತಿರುಗಿದ ಘಟನೆ ಗುಜರಾತ್‌ನ ವಡೋದರಾದಲ್ಲಿ ಜರುಗಿದೆ.
ಸಂತ್ರಸ್ತ ಮಹಿಳೆ ’ಅಭ್ಯಂ’ ಸಹಾಯವಾಣಿಗೆ ಕರೆ ಮಾಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಹಾಗೆಯೇ ಈ ಸುದ್ದಿ ವೈರಲ್ ಆಗಿದ್ದು, ಎಲ್ಲೆಡೆ ಚರ್ಚೆಯಾಗುತ್ತಿದೆ.
ವರದಿಗಳ ಪ್ರಕಾರ; ಪತಿ-ಪತ್ನಿಯರು ಸಾಮಾಜಿಕ ಜಾಲತಾಣದಲ್ಲಿ ಪ್ರತ್ಯೇಕ ಖಾತೆಗಳನ್ನು ಹೊಂದಿದ್ದಾರೆ. ಪತಿ ಹಾಕುವ ಪೋಸ್ಟ್‌ಗಳಿಗೆ ನಿಮಿಷಗಳಲ್ಲಿ ಭಾರೀ ಸಂಖ್ಯೆಯಲ್ಲಿ ಲೈಕ್ಸ್ ಬರುವುದನ್ನು ನೋಡಿದ ಪತ್ನಿಗೆ ಗಂಡನ ಮೇಲೆ ಹೊಟ್ಟೆಕಿಚ್ಚು ಶುರುವಾಗಿದೆ. ಅಲ್ಲದೇ ಬಹಳಷ್ಟು ಲೈಕ್ಸ್ ಗಳನ್ನು ಮಹಿಳೆಯರೇ ನೀಡಿದ್ದು, ಆಕೆಯನ್ನು ಮತ್ತಷ್ಟು ಕೆರಳಿಸಿದೆ.
ಇದೇ ವಿಚಾರವಾಗಿ ಅಕ್ಟೋಬರ್ 22ರಂದು ತನ್ನ ಸಹನೆ ಕಳೆದುಕೊಂಡ ಮಹಿಳೆ ತನ್ನ ಪತಿಯ ಫೋನ್ ಕಸಿದುಕೊಂಡು ಬಯ್ದಿದ್ದಾಳೆ. ಇದರಿಂದ ಕೋಪಗೊಂಡ ಪತಿಯೂ ಜಗಳವಾಡಿದ್ದು, ಪರಿಸ್ಥಿತಿ ಕೈಮೀರಿದಾಗ ಆಕೆಯ ಮೇಲೆ ಕೈ ಮಾಡಿದ್ದಾನೆ ಎಂದು ʼಅಭ್ಯಂʼಗೆ ಮಹಿಳೆ ಕೊಟ್ಟ ದೂರಿನಲ್ಲಿ ತಿಳಿದು ಬಂದಿದೆ.
ದಂಪತಿಯ ಮನೆಗೆ ತೆರಳಿದ ಕೌನ್ಸಿಲರ್‌ಗಳು ಪತಿಗೆ ಎಚ್ಚರಿಕೆ ನೀಡಿದ್ದಾರೆ. “ಮೊದಲಿಗೆ, ನಾವು ತನ್ನ ಮಡದಿ ಮೇಲೆ ಕೈ ಮಾಡಿದ ವ್ಯಕ್ತಿಗೆ ಎಚ್ಚರಿಕೆ ನೀಡಿದ್ದೇವೆ. ಮತ್ತೊಮ್ಮೆ ಮಡದಿ ಮೇಲೆ ಕೈ ಮಾಡಿದರೆ ಕಾನೂನು ರೀತ್ಯಾ ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ ನಾವು, ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದನ್ನೆಲ್ಲ ಮನಬಂದಂತೆ ಅರ್ಥೈಸಿಕೊಳ್ಳುವುದನ್ನು ಬಿಡಲು ಮಹಿಳೆಗೂ ತಿಳಿಸಿದ್ದೇವೆ,” ಎಂದು ಕೌನ್ಸಿಲರ್ ತಿಳಿಸಿದ್ದಾರೆ.