ಬಡ ಜನರ ಜೀವನಕ್ಕೆ ಹೊಸ ತಿರುವು ನೀಡುವ ಉದ್ದೇಶದಿಂದ ವಿನೂತನ ಆಲೋಚನೆಯನ್ನು ಕಾರ್ಯರೂಪಕ್ಕೆ ತಂದಿದ್ದಾರೆ ಒಡಿಶಾದ ಸಾಮಾಜಿಕ ಹೋರಾಟಗಾರ ಚಂದ್ರ ಮಿಶ್ರಾ.
’ದಿ ಬೆಗ್ಗರ್ಸ್ ಕಾರ್ಪೋರೇಷನ್’ ಹೆಸರಿನ ಈ ಸಂಘಟನೆಯು ’ದಾನ ಮಾಡಬೇಡಿ, ಹೂಡಿಕೆ ಮಾಡಿ’ ಎಂಬ ಘೋಷವಾಕ್ಯದೊಂದಿಗೆ ಭಿಕ್ಷುಕರ ಜೀವನ ಬದಲಿಸಲು ಹೊರಟಿದೆ. ಭಿಕ್ಷಕರಿಗೆ ದಾನ ಮಾಡುವ ಬದಲಿಗೆ ಅವರ ಮೇಲೆ ಹೂಡಿಕೆ ಮಾಡಿ ಎಂದು ಹೇಳುತ್ತಾರೆ ಚಂದ್ರ ಮಿಶ್ರಾ. ಆರು ತಿಂಗಳ ಒಳಗಾಗಿ ಹೀಗೆ ಹೂಡಿಕೆ ಮಾಡಿದ ಮಂದಿಗೆ 16.5% ಬಡ್ಡಿಯೊಂದಿಗೆ ದುಡ್ಡು ಹಿಂದಿರುಗಿಸಿದ್ದಾರೆ ಚಂದ್ರ.
ಕೋವಿಡ್-19 ಲಾಕ್‌ಡೌನ್ ಅವಧಿಯಲ್ಲಿ ತಮ್ಮತ್ತ ನೆರವಿನ ಹಸ್ತ ಕೋರಿ ಬಂದ ಭಿಕ್ಷುಕರಿಗೆ ಅನೇಕ ಕೌಶಲ್ಯಗಳನ್ನು ಕಲಿಸಿದ್ದಾರೆ. ನಿಧಾನವಾಗಿ ಬಹಳಷ್ಟು ಭಿಕ್ಷುಕರ ಸೇರಿಕೊಂಡು ಈ ಸಂಘ ಕಟ್ಟಿಕೊಂಡಿದ್ದಾರೆ.
“ನಾವು ತೆಗೆದುಕೊಂಡಿದ್ದ ಹಣವನ್ನು ಆರು ತಿಂಗಳಲ್ಲಿ 16.1% ಬಡ್ಡಿಯೊಂದಿಗೆ ಹಿಂದಿರುಗಿಸಿದ್ದೇವೆ. ನಾವು ಇದನ್ನು ಮಾಡಬಲ್ಲೆವು ಎಂದು ಅಂದುಕೊಂಡಿರಲಿಲ್ಲ. ಆದರೆ ನಮಗೆ ಹೂಡಿಕೆ ಬೇಕಿತ್ತು, ದಾನವಲ್ಲ, ಅದು ನಮಗೆ ಸಿಕ್ಕಿತು ಕೂಡಾ. ಇದರಿಂದ ಹೂಡಿಕೆದಾರರಿಗೂ ಲಾಭ ಬಂದಿದೆ,” ಎಂದು ವಿವರಿಸಿದ್ದಾರೆ ಚಂದ್ರ.
ತಮ್ಮ ಸ್ನೇಹಿತರಾದ ಬದ್ರಿನಾಥ್ ಮಿಶ್ರಾ ಹಾಗೂ ದೇವೇಂದ್ರ ಥಾಪಾರೊಂದಿಗೆ ಭಿಕ್ಷುಕರ ಸಂಘಟನೆಯನ್ನು ’ಲಾಭಕ್ಕಾಗಿ ಸಂಸ್ಥೆ’ ಎಂದು ನೋಂದಣಿ ಮಾಡಿಸಿದರು. ಈ ಮೂಲಕ 14 ಭಿಕ್ಷುಕರ ಕುಟುಂಬಗಳನ್ನು ಉದ್ಯಮಶೀಲರನ್ನಾಗಿ ಮಾಡಿದ್ದಾರೆ ಚಂದ್ರ. 12 ಕುಟುಂಬಗಳು ಬ್ಯಾಗ್ ನಿರ್ಮಾಣದಲ್ಲಿ ಭಾಗಿಯಾಗಿದ್ದು, ಮಿಕ್ಕೆರಡು ಕುಟುಂಬಗಳು ದೇವಸ್ಥಾನಗಳ ಬಳಿ ಹೂವುಗಳು ಹಾಗೂ ಪೂಜಾ ಸಾಮಗ್ರಿಗಳ ಮಾರಾಟ ಮಾಡುತ್ತಾರೆ.
ಪ್ರತಿಯೊಬ್ಬ ಭಿಕ್ಷುಕನಿಗೂ 1.5 ಲಕ್ಷ ರೂ. ಹೂಡಿಕೆ ಮಾಡುತ್ತಾರೆ ಮಿಶ್ರಾ. ಇದರಲ್ಲಿ 50,000 ರೂ. ಗಳು ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಕ್ಕೆ ಹಾಗೂ ಮಿಕ್ಕ ಮೊತ್ತವು ಉದ್ಯಮ ಆರಂಭಿಸಲು ಅಗತ್ಯವಿರುವ ಮೂಲ ಸೌಕರ್ಯ ಒದಗಿಸಲು ಖರ್ಚಾಗುತ್ತದೆ. ಭಿಕ್ಷುಕರ ಸಂಘಟನೆಯೊಂದಿಗೆ ’ಸ್ಕೂಲ್ ಆಫ್ ಲೈಫ್’ ಹೆಸರಿನಲ್ಲಿ ಶಾಲೆಯನ್ನು ತೆರೆದಿರುವ ಚಂದ್ರ, ವಾರಣಾಸಿಯ ಘಾಟ್‌ಗಳಲ್ಲಿ ಭಿಕ್ಷೆ ಬೇಡುವ ಮಕ್ಕಳಿಗೆ ಶಿಕ್ಷಣ ನೀಡಲು ಮುಂದಾಗಿದ್ದಾರೆ.
ಭಿಕ್ಷುಕರ ಸಂಘಟನೆಯು ಚಂದ್ರ ಮಿಶ್ರಾರನ್ನು 100 ಆವಿಷ್ಕಾರೀ ಸ್ಟಾರ್ಟ್‌ಅಪ್‌ಗಳು ಹಾಗೂ ಟಾಪ್ 16 ಮೈಂಡ್‌ಫುಲ್ ಸ್ಟಾರ್ಟ್‌ಅಪ್‌ಗಳ ಪಟ್ಟಿಯಲ್ಲಿ ಸೇರಿಸಿವೆ. 57 ಮಂದಿ ಈ ಅಭಿಯಾನದಲ್ಲಿ ಹೂಡಿಕೆ ಮಾಡಿದ್ದು, ಅವರಿಗೆಲ್ಲಾ ಕೌಶಲ್ಯ ಕಲಿಸಿಕೊಟ್ಟ ಚಂದ್ರ, ಸ್ವಯಂ ಉದ್ಯೋಗ ಕಟ್ಟಿಕೊಳ್ಳಲು ನೆರವಾಗಿದ್ದಾರೆ.
ಭಿಕ್ಷಕರ ಜೀವನ ಬದಲಾವಣೆ ಮಾಡುವ ವಿಶಿಷ್ಟ ಮಾರ್ಗವಾಗಿ ಗೋಚರಿಸಿರುವ ಚಂದ್ರರ ಈ ಅಭಿಯಾನ ಬಹಳಷ್ಟು ಮಂದಿಗೆ ಪ್ರೇರಣೆ ನೀಡಿದೆ.