ಹಣದ ಆಸೆಗಾಗಿ ಪೋಷಕರ ಎದುರು ಪುತ್ರ ಕಿಡ್ನಾಪ್ ನಾಟಕವಾಡಿದ ವಿಚಿತ್ರ ಘಟನೆಯೊಂದು ವರದಿಯಾಗಿದೆ. ತಾನು ಕಿಡ್ನಾಪ್ ಆಗಿದ್ದೇನೆ ಎಂದು ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ತಂದೆಯಿಂದ ಹಣ ಪೀಕಲು ಪುತ್ರ ಪ್ಲಾನ್ ಮಾಡಿದ್ದ ಎನ್ನಲಾಗಿದೆ.
ಉತ್ತರ ಪ್ರದೇಶದ ಬಿಜನೂರು ಎಂಬಲ್ಲಿ ದೇಶ್ಬಂಧು ಗುಪ್ತಾ ಪೊಲೀಸ್ ಠಾಣೆಯಲ್ಲಿ ತಮ್ಮ ಪುತ್ರ ಸುಶಾಂತ್ ಕಿಡ್ನಾಪ್ ಆಗಿರುವ ಬಗ್ಗೆ ದೂರನ್ನು ನೀಡಿದ್ದರು. 20 ವರ್ಷದೊಳಗಿನ ಪ್ರಾಯದ ಸುಶಾಂತ್ ಮೊಬೈಲ್ ಸೆಪ್ಟೆಂಬರ್ 19ರಿಂದ ಸ್ವಿಚ್ ಆಫ್ ಆಗಿದೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸಪ್ಟೆಂಬರ್ 27ರಂದು ಪುತ್ರನ ಮೊಬೈಲ್ ನಂಬರ್ನಿಂದ ಗುಪ್ತಾರಿಗೆ ಒಂದು ಮೆಸೇಜ್ ಬಂದಿತ್ತು. ಇದರಲ್ಲಿ ಸುಶಾಂತ್ ತಮ್ಮ ಬಳಿ 75 ಸಾವಿರ ರೂಪಾಯಿ ಸಾಲ ಪಡೆದಿದ್ದು ಅದನ್ನು ನೀವು ಹಿಂತಿರುಗಿಸದೇ ಹೋದಲ್ಲಿ ನಾವು ಆತನನ್ನು ಕೊಲೆ ಮಾಡುತ್ತೇವೆ ಎಂದು ಬೆದರಿಕೆಯೊಡ್ಡಲಾಗಿತ್ತು.
ಯುವಕ ಕಣ್ಮರೆಯಾದ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರಿಗೆ ಸುಶಾಂತ್ ಕಳ್ಳಾಟ ತಿಳಿದುಬಂದಿದೆ. ಸಾಕಷ್ಟು ವಿಚಾರಣೆಯ ಬಳಿಕ ಸುಶಾಂತ್ ಹಣದ ಆಸೆಗಾಗಿ ತಾನೇ ಕಿಡ್ನಾಪ್ ನಾಟಕ ಆಡಿದ್ದಾಗಿ ಒಪ್ಪಿಕೊಂಡಿದ್ದಾನೆ.