ಮುಂಬೈ: ಯಾರ್ಯಾರ ಒಳಗೆ ಏನೇನು ಪ್ರತಿಭೆಗಳು ಅಡಗಿ ಇರುತ್ತವೆ ಎಂದು ಹೇಳುವುದು ಕಷ್ಟ. ಆಟೋ ಚಾಲಕನೊಬ್ಬನ ಅಪೂರ್ವ ಪ್ರತಿಭೆಯ ವಿಡಿಯೋ ಒಂದು ಇದೀಗ ವೈರಲ್ ಆಗಿದೆ. ರಾಜೀವ್ ಕೃಷ್ಣ ಎಂಬುವವರು ತಮ್ಮ ಇನ್ಸ್ಟಾಗ್ರಾಮ್ ಪುಟದಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ.
ಮುಂಬೈನಲ್ಲಿ ಆಟೋದಲ್ಲಿ ಹೋಗುತ್ತಿರುವಾಗ ತಮಗಾಗಿರುವ ಅನುಭವದ ಕುರಿತು ಅವರು ಶೇರ್ ಮಾಡಿಕೊಂಡಿದ್ದಾರೆ. ತಾವು ಹೋಗುತ್ತಿರುವ ಆಟೋದ ಚಾಲಕ 61 ವರ್ಷದ ರಾಮ್‌ದೇವ್ ಅವರ ಬಗ್ಗೆ ವಿಡಿಯೋದಲ್ಲಿ ರಾಜೀವ್ ಉಲ್ಲೇಖಿಸಿದ್ದಾರೆ.
ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿಹಾಕಿಕೊಂಡ ಸಮಯದಲ್ಲಿ ಆಟೋ ಚಾಲಕನೊಂದಿಗೆ ಮಾತಿಗಿಳಿದಾಗ ತಮಗೆ ಬಂದ ಅನುಭವದ ಕುರಿತು ಅವರು ಉಲ್ಲೇಖಿಸಿದ್ದಾರೆ. ಟ್ರಾಫಿಕ್ ಜಾಮ್ಗೆ ಸಿಲುಕಿದ ಸಮಯದಲ್ಲಿ ಆಟೊ ಚಾಲಕ ಮಾತಿಗಿಳಿದು ನೀವು ಎಷ್ಟು ದೇಶ ನೋಡಿದ್ದೀರಿ ಎಂದು ರಾಜೀವ್ ಅವರನ್ನು ಕೇಳುತ್ತಾನೆ. ನಂತರ ಹೀಗೆ ಮಾತಿಗೆ ಮಾತು ಮುಂದುವರೆದಾಗ ಚಾಲಕ ರಾಮದೇವ್ ತನಗೆ 44 ಯುರೋಪಿಯನ್ ಖಂಡಗಳ ಹೆಸರುಗಳು ತಿಳಿದಿರುವುದಾಗಿ ಹೇಳಿ ಅವುಗಳನ್ನು ಹೆಸರಿಸುತ್ತಾನೆ.
ಮಾತ್ರವಲ್ಲದೇ, ಕೆಲವು ಪ್ರಮುಖ ಯುರೋಪಿಯನ್ ರಾಷ್ಟ್ರಗಳ ಪ್ರಧಾನ ಮಂತ್ರಿಗಳು / ಅಧ್ಯಕ್ಷರನ್ನು ಹೆಸರಿಸಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಚಾಲಕ ಮಹಾರಾಷ್ಟ್ರದ ಸಿಂಧುದುರ್ಗದ ನಿವಾಸಿಯಾಗಿದ್ದು, ಈತ ತಮ್ಮ ತವರು ರಾಜ್ಯದ ಎಲ್ಲಾ 35 ಜಿಲ್ಲೆಗಳಿನ್ನು ಹೆಸರಿಸಿದ್ದಾರೆ. ಅಷ್ಟೇ ಅಲ್ಲದೆ ಗುಜರಾತ್‌ನ ಎಲ್ಲಾ 33 ಜಿಲ್ಲೆಗಳು ಮತ್ತು ಯುಪಿಯ ಎಲ್ಲಾ 75 ಜಿಲ್ಲೆಗಳನ್ನು ಹೆಸರಿಸಿದ್ದಾರೆ ಎಂದು ರಾಜೀವ್ ಹೇಳಿದ್ದು, ನೆಟ್ಟಿಗರಿಂದ ಮೆಚ್ಚುಗೆಗಳ ಮಹಾಪೂರವೇ ಹರಿದು ಬಂದಿದೆ.