ವಿಷರಹಿತವೆಂದು ಖರೀದಿಸಿದ ನಾಗರಹಾವೊಂದು ವಿಷಪೂರಿತವಾಗಿದ್ದು, ಅದು ಕಚ್ಚಿದ ಪರಿಣಾಮ ವ್ಯಕ್ತಿಯೊಬ್ಬರು ಸಾವಿನ ದವಡೆಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಈಶಾನ್ಯ ಚೀನಾದ ಹೆಲಿಯೋಂಗ್ ಜಿಯಾಂಗ್ ಪ್ರಾಂತ್ಯದಲ್ಲಿ ಘಟಿಸಿದೆ.
ಲಿಯೂ ಹೆಸರಿನ ಈ ವ್ಯಕ್ತಿ ಒಂದು ಮೀಟರ್ ಉದ್ದದ ನಾಗರಹಾವನ್ನು ತಂದಿದ್ದು, ಸಾಕುಪ್ರಾಣಿಯಾಗಿ ಅದನ್ನು ಸಾಕಲು ಇಚ್ಛಿಸಿದ್ದ. ಹಾವಿನ ವಿಷದ ಗ್ರಂಥಿಯನ್ನು ತೆಗೆದುಹಾಕಲಾಗಿದೆ ಎಂದು ಖರೀದಿ ವೇಳೆ ಈತನಿಗೆ ತಿಳಿಸಲಾಗಿತ್ತು.
ಆ ಹಾವಿನೊಂದಿಗೆ ಒಂದು ದಿನ ಹೀಗೆ ಮಲಗಿದ್ದ ಲಿಯೂ, ಹಾವಿನಿಂದ ಕಡಿತಕ್ಕೆ ಒಳಗಾಗಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ತ್ವರಿತ ಚಿಕಿತ್ಸೆ ಕೊಟ್ಟ ಕಾರಣ ಆತ ಪಾರಾಗಿದ್ದಾನೆ.
ಹಾವನ್ನು ಖರೀದಿ ಮಾಡಿದ ಜಾಗಕ್ಕೆ ತೆರಳಿ ವಿಚಾರಿಸಿದ ವೇಳೆ, ತಾನು ಮಾರಾಟದ ವೇಳೆ ತಪ್ಪಾದ ಹಾವನ್ನು ಕೊಟ್ಟಿರುವುದಾಗಿ ಅಂಗಡಿಯಾತ ತಿಳಿಸಿದ್ದಾನೆ. ಜೀವನದಲ್ಲಿ ಇನ್ನೆಂದೂ ಹಾವು ಸಾಕುವ ಸಾಹಸಕ್ಕೆ ಕೈ ಹಾಕುವುದಿಲ್ಲ ಎಂದು ಲಿಯೂ ಶಪಥಗೈದಿದ್ದಾನೆ.