ವಿಮಾನಗಳಲ್ಲಿ ಸಂಚಾರ ಮಾಡುವವರು ಸಾಮಾನ್ಯವಾಗಿ ಶ್ರೀಮಂತ ವರ್ಗದವರು. ಆದ್ದರಿಂದ ಎಷ್ಟು ದುಡ್ಡು ಖರ್ಚಾದರೂ ಪರವಾಗಿಲ್ಲ ಎನ್ನುವ ಮನಸ್ಥಿತಿ ಇರುವವರು. ಆದರೆ ಇದೀಗ ಮಧ್ಯಮ ವರ್ಗದ ಕುಟುಂಬಗಳವರೂ ವಿಮಾನ ಸಂಚಾರವನ್ನು ಹಲವು ಬಾರಿ ನಡೆಸುವುದು ಅನಿವಾರ್ಯವಾಗುತ್ತದೆ.
ಆಗ ಟಿಕೆಟ್ಗೆ ದುಬಾರಿ ಬೆಲೆ ಕೊಡುವುದು ಒಂದೆಡೆಯಾದರೆ, ವಿಮಾನ ನಿಲ್ದಾಣಗಳಲ್ಲಿ ಆಹಾರಗಳಿಗೆ ವಿಧಿಸುವ ಐದಾರು ಪಟ್ಟು ಹೆಚ್ಚಿಗೆ ದುಡ್ಡು ಕೊಡುವುದು ಕೂಡ ದೊಡ್ಡ ಕಷ್ಟವೇ. ಅದನ್ನು ವಿವರಿಸುವ ವಿಡಿಯೋ ಒಂದು ಇದೀಗ ವೈರಲ್ ಆಗಿದೆ.
ಟ್ವಿಟ್ಟರ್ ಬಳಕೆದಾರ ಮಧುರ್ ಸಿಂಗ್ ಮತ್ತು ಅವರ ತಾಯಿ ಗೋವಾಗೆ ವಿಮಾನ ಹತ್ತುವ ಮೊದಲು ಏರ್ ಪೋರ್ಟ್‌ನಲ್ಲಿ ಮನೆಯಲ್ಲಿ ತಯಾರಿಸಿದ ಆಲೂ ಪರಾಠ ಮತ್ತು ನಿಂಬು ಆಚಾರ್‌ನ ಊಟವನ್ನು ತಿನ್ನುತ್ತಿರುವ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.
“ವಿಮಾನಗಳಲ್ಲಿ ಪ್ರಯಾಣ ಮಾಡುವುದು ಮಧ್ಯಮ ವರ್ಗದವರಿಗೆ ಈಗ ಸುಲಭವಾಗಿದ್ದರೂ 400 ರೂಪಾಯಿ ಮೌಲ್ಯದ ದೋಸೆ ಮತ್ತು 100 ರೂಪಾಯಿ ಮೌಲ್ಯದ ನೀರಿನ ಬಾಟಲಿಯನ್ನು ಖರೀದಿಸುವುದು ಬಹಳ ಕಷ್ಟ” ಎಂದು ಮಧುರ್ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
ತಮ್ಮ ಈ ವರ್ತನೆಯನ್ನು ನೋಡಿ ಹಲವರು ನಗುತ್ತಾರೆ. ಕೆಲವರು ನಮ್ಮನ್ನು ವಿಚಿತ್ರವಾಗಿ ನೋಡುತ್ತಾರೆ, ಆದರೆ ನಮಗೇನೂ ತೊಂದರೆಯಿಲ್ಲ, ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದು, ನೆಟ್ಟಿಗರು ಬಹಳ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.