ಉತ್ತರಪ್ರದೇಶದ ಮೀರತ್ ನಲ್ಲಿ ಕೇವಲ 15 ರೂಪಾಯಿ ಹಣ ನೀಡುವ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಓರ್ವನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
58 ವರ್ಷದ ಟೀ ಸ್ಟಾಲ್ ಮಾಲೀಕನನ್ನು ಇಬ್ಬರು ಅಪರಿಚಿತ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ.
ಸಂತ್ರಸ್ತ ಓಂಕಾರ್ ಸಿಂಗ್, ಮೆಡಿಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಜಾಗೃತಿ ವಿಹಾರ್ ಪ್ರದೇಶದಲ್ಲಿ ತನ್ನ ಟೀ ಅಂಗಡಿ ನಡೆಸುತ್ತಿದ್ದರು.
ಶುಕ್ರವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಮೋಟಾರ್ ಸೈಕಲ್‌ನಲ್ಲಿ ಇಬ್ಬರು ವ್ಯಕ್ತಿಗಳು ಓಂಕಾರ್ ಸಿಂಗ್ ಅವರ ಟೀ ಸ್ಟಾಲ್‌ಗೆ ಬಂದು ಎರಡು ತಂಬಾಕು ಪ್ಯಾಕೆಟ್ ಕೇಳಿದರು. ಅದಕ್ಕೆ 15 ರೂ.ಗಳನ್ನು ಪಾವತಿಸಲು ಸಿಂಗ್ ಕೇಳಿದಾಗ ವಿವಾದ ಉಂಟಾಗಿದೆ.
ಹಣ ನೀಡಲು ವ್ಯಕ್ತಿಗಳು ನಿರಾಕರಿಸಿದಾದ ಮಾತಿನ ಚಕಮಕಿಗೆ ಕಾರಣವಾಯಿತು. ಗಲಾಟೆ ಜೋರಾದಾಗ ಒಬ್ಬ ವ್ಯಕ್ತಿ ಸಿಂಗ್ ಮೇಲೆ ಗುಂಡು ಹಾರಿಸಿದ. ದಾಳಿಯಲ್ಲಿ ಸಿಂಗ್ ಅವರ ಹೊಟ್ಟೆ ಮತ್ತು ಎದೆಗೆ ಎರಡು ಗುಂಡುಗಳು ತಗುಲಿ ಗಾಯಗೊಂಡಿದ್ದಾರೆ. ನಂತರ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಸ್ಥಳೀಯರು ಪೊಲೀಸರ ಬಳಿ ಹೇಳಿದ್ದಾಗಿ ತನಿಖಾಧಿಕಾರಿಗಳು ತಿಳಿಸಿದರು.
ಮಾಹಿತಿ ಪಡೆದ ನಂತರ ನಮ್ಮ ಸಿಬ್ಬಂದಿಗಳು ಸ್ಥಳಕ್ಕೆ ತಲುಪಿ ಸಿಂಗ್ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ ಅವರು ಬದುಕುಳಿಯಲಿಲ್ಲ. ಸಂತ್ರಸ್ತನ ಪುತ್ರ ನೀಡಿದ ದೂರಿನ ಮೇರೆಗೆ ಇಬ್ಬರು ಅಪರಿಚಿತ ವ್ಯಕ್ತಿಗಳ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿಗಳ ಪತ್ತೆಗೆ ಐದು ತಂಡಗಳನ್ನು ರಚಿಸಲಾಗಿದೆ ಎಂದು ಎಸ್‌ಪಿ (ನಗರ) ಪಿಯೂಷ್ ಕುಮಾರ್ ತಿಳಿಸಿದ್ದಾರೆ. ಆ ಪ್ರದೇಶದಲ್ಲಿನ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.