ಇತ್ತೀಚೆಗೆ ಎಲ್ಲರೂ ಬೆಂಗಳೂರು ನಗರದಲ್ಲಿ ಎಲ್ಲೇ ಪ್ರಯಾಣಿಸಬೇಕೆಂದರೂ ಓಲಾ, ಉಬರ್ ಕ್ಯಾಬ್ ಮಾಡುವುದು ಸಾಮಾನ್ಯವಾಗಿದೆ. ಕೆಲವೊಮ್ಮೆ ಇದರ ಹೆಚ್ಚಿನ ದರದಿಂದ ಗ್ರಾಹಕರು ಹೌಹಾರುವಂತಾಗಿದೆ. ಇದೀಗ ವ್ಯಕ್ತಿಯೊಬ್ಬರು ಹೆಚ್ಚಿನ ಉಬರ್ ದರದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಬೆಂಗಳೂರು ವಿಮಾನ ನಿಲ್ದಾಣವನ್ನು ತಲುಪಿದ ವ್ಯಕ್ತಿಯೊಬ್ಬರು, ತಮ್ಮ ಗಮ್ಯಸ್ಥಾನ ಎಲೆಕ್ಟ್ರಾನಿಕ್ ಸಿಟಿಗೆ ಹೋಗುವುದಕ್ಕಾಗಿ ಕ್ಯಾಬ್ ಹುಡುಕುತ್ತಿದ್ದರು. ಇದಕ್ಕಾಗಿ ಉಬರ್ ಅಪ್ಲಿಕೇಶನ್ ಅನ್ನು ತೆರೆದಾಗ ಅವರು ಆಘಾತಗೊಂಡಿದ್ದಾರೆ. ಯಾಕೆಂದರೆ ಅತಿ ಹೆಚ್ಚಿನ ಕ್ಯಾಬ್ ದರ ಅವರನ್ನು ಶಾಕ್ ಆಗುವಂತೆ ಮಾಡಿದೆ. ಇದರ ಸ್ಕ್ರೀನ್‌ಶಾಟ್ ಅನ್ನು ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
52 ಕಿ.ಮೀ ದೂರಕ್ಕೆ ಉಬರ್ ಪ್ರೀಮಿಯಂ ದರವು 2,584 ರೂ. ಆಗಿದ್ದರೆ, ಉಬರ್ ಎಕ್ಸ್‌ಎಲ್ ರೈಡ್‌ನ ಬೆಲೆ 4,051 ರೂ. ಬೆಂಗಳೂರು ವಿಮಾನ ನಿಲ್ದಾಣದಿಂದ ಎಲೆಕ್ಟ್ರಾನಿಕ್ ಸಿಟಿಗೆ ಉಬರ್ ಕ್ಯಾಬ್ ದರವು ನಾನು ಫ್ಲೈಟ್ ಟಿಕೆಟ್‌ಗೆ ಪಾವತಿಸಿದ್ದಕ್ಕಿಂತ ಹೆಚ್ಚಿದೆ ಎಂದು ಅವರು ತಮ್ಮ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ.
52 ಕಿ.ಮೀ ದೂರದ ಕ್ಯಾಬ್ ದರಗಳಿಂದ ಇಂಟರ್ನೆಟ್ ಬಳಕೆದಾರರೂ ಆಘಾತಕ್ಕೊಳಗಾಗಿದ್ದಾರೆ. ಕೇವಲ ದರ ಮಾತ್ರವಲ್ಲದೆ ಪ್ರಯಾಣದ ಸಮಯವೂ ಹೆಚ್ಚಾಗಿ ದೇಶೀಯ ವಿಮಾನಯಾನಕ್ಕೆ ಸಮಾನವಾಗಿರುತ್ತದೆ ಎಂದು ಹಲವು ಬಳಕೆದಾರರು ಬರೆದಿದ್ದಾರೆ. ಇದಕ್ಕಿಂತ ಎಸಿ ಬಸ್ ನಲ್ಲಿ ಆರಾಮವಾಗಿ ಪ್ರಯಾಣಿಸಬಹುದು ಎಂದು ಮತ್ತೊಬ್ಬ ಪ್ರಯಾಣಿಕರು ತಿಳಿಸಿದ್ದಾರೆ.