ಬೆಂಗಳೂರು: ಪ್ರವಾಹದ ನಡುವೆ ವ್ಯಕ್ತಿಯೊಬ್ಬ ತನ್ನ ಲಿವಿಂಗ್ ರೂಮ್ ನಲ್ಲಿ ಈಜುತ್ತಿರುವ ವಿಡಿಯೋ ವೈರಲ್ ಆಗಿದೆ.
ಬೆಂಗಳೂರಿನಲ್ಲಿ ಸತತವಾಗಿ ಧಾರಾಕಾರ ಮಳೆ ಸುರಿಯುತ್ತಿದ್ದು, ಪ್ರವಾಹ ಪರಿಸ್ಥಿತಿಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಹೆಚ್ಚಿನ ಮಳೆ ಮತ್ತು ಮೋಡ ಕವಿದ ವಾತಾವರಣದ ಮುನ್ಸೂಚನೆಯು ಮಳೆಯಿಂದ ಜರ್ಜರಿತವಾಗಿರುವ ಬೆಂಗಳೂರಿನ ನಾಗರಿಕರಿಗೆ ಆತಂಕ ಉಂಟುಮಾಡಿದೆ. ಹಿಂದಿನ ದಿನ ಮಳೆ ಸ್ವಲ್ಪ ಬಿಡುವಿನ ನಂತರ ಮನೆಗೆ ವಾಪಸಾಗಲು ಜನ ತಯಾರಿ ನಡೆಸುತ್ತಿದ್ದು, ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ನೀರಿನ ಮಟ್ಟ ನಿಧಾನವಾಗಿ ಕಡಿಮೆಯಾಗ್ತಿದೆ.
ಜಲಾವೃತಗೊಂಡ ಪ್ರದೇಶಗಳು ಮತ್ತು ಅಪಾರ್ಟ್ ಮೆಂಟ್ ಗಳ ನಿವಾಸಿಗಳು ನೀರನ್ನು ಹೊರಹಾಕಲು ಮತ್ತು ತಮ್ಮ ಮನೆ ಮತ್ತು ನೆಲಮಾಳಿಗೆಯಿಂದ ಕೆಸರು ತೆಗೆಯಲು ಪ್ರಯತ್ನಿಸುತ್ತಿದ್ದಾರೆ. ನಗರದ ಬಹುತೇಕ ಭಾಗಗಳಲ್ಲಿ ರಸ್ತೆಗಳಲ್ಲಿ ನೀರು ತುಂಬಿ ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ.
ಪ್ರವಾಹ ಪೀಡಿತ ಪ್ರದೇಶಗಳು ಮತ್ತು ಅಪಾರ್ಟ್ ಮೆಂಟ್‌ಗಳ ಕೆಲವು ನಿವಾಸಿಗಳು, ಸಂಬಂಧಿಕರು ಅಥವಾ ಸ್ನೇಹಿತರ ಮನೆಗಳು ಅಥವಾ ಹೋಟೆಲ್‌ಗಳಂತಹ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಂಡಿದ್ದು, ಈಗ ಮಳೆ ಇಳಿಮುಖವಾಗಿದ್ದರಿಂದ ನೀರು ನುಗ್ಗಿ ಹಾನಿಗೊಳಗಾದ ಮನೆಗಳಲ್ಲಿ ಸ್ವಚ್ಛತಾ ಕಾರ್ಯಕ್ಕಾಗಿ ತಮ್ಮ ಮನೆಗಳಿಗೆ ಮರಳುತ್ತಿದ್ದಾರೆ.
ಪ್ರವಾಹ ಪರಿಸ್ಥಿತಿಯ ನಡುವೆ, ಎಪ್ಸಿಲಾನ್ ನಂತಹ ಐಷಾರಾಮಿ ಪ್ರದೇಶದಲ್ಲಿ ವಿಲ್ಲಾದ ಲಿವಿಂಗ್ ರೂಮ್ ನಲ್ಲಿ ವ್ಯಕ್ತಿಯೊಬ್ಬರು ಈಜುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಟ್ವಿಟ್ಟರ್ ನಲ್ಲಿ ಹಂಚಿಕೊಂಡ ಕ್ಲಿಪ್ ನಲ್ಲಿ ವ್ಯಕ್ತಿಯು ತನ್ನ ಮನೆಯ ನೆಲ ಮಹಡಿಯಲ್ಲಿ ಪ್ರವಾಹದಲ್ಲಿ ಈಜುವಾಗ ಮನೆಯ ವಸ್ತುಗಳು ಸುತ್ತಲೂ ತೇಲುತ್ತಿರುವುದನ್ನು ಕಾಣಬಹುದು.
ಎಪ್ಸಿಲಾನ್ ಬೆಂಗಳೂರಿನಲ್ಲಿರುವ ಐಷಾರಾಮಿ ಪ್ರದೇಶವಾಗಿದ್ದು, ವಿಪ್ರೋ ಅಧ್ಯಕ್ಷ ರಿಷಾದ್ ಪ್ರೇಮ್ ಜೀ, ಬ್ರಿಟಾನಿಯಾ ಸಿಇಒ ವರುಣ್ ಬೆರ್ರಿ, ಬೈಜುಸ್ ರವೀಂದ್ರನ್ ಮತ್ತು ಬಿಗ್ ಬಾಸ್ಕೆಟ್ ಸಹ-ಸಂಸ್ಥಾಪಕ ಅಭಿನಯ್ ಚೌಧರಿ ಅವರಂತಹ ಬಿಲಿಯನೇರ್ ಗಳಿಗೆ ನೆಲೆಯಾಗಿದೆ.
https://twitter.com/RajuKCRTrs9999/status/1567590269943685120