ತಾನು ಎಷ್ಟು ಸಂಪಾದನೆ ಮಾಡೋದನ್ನ ತಿಳಿದುಕೊಳ್ಳಬೇಕೆಂಬ ಕೆಟ್ಟ ಕುತೂಹಲಕ್ಕೆ ಬಿದ್ದ ನನ್ನ ಅತ್ತೆ ಮಾವ ನನ್ನನ್ನ ಕೋಣೆಯಲ್ಲಿ ಕೂಡಿ ಹಾಕಿದ್ದರು ಎಂದು ವ್ಯಕ್ತಿಯೊಬ್ಬ ಸೋಶಿಯಲ್ ಮೀಡಿಯಾದಲ್ಲಿ ಆರೋಪ ಮಾಡಿದ್ದಾನೆ. ತನ್ನ ಭಾವಿ ಪತ್ನಿಯ ತಂದೆ – ತಾಯಿ ಹಣಬಾಕರು ಎಂದು ರೆಡಿಟ್ನಲ್ಲಿ ವ್ಯಕ್ತಿಯು ತನ್ನ ಅಳಲನ್ನ ತೋಡಿಕೊಂಡಿದ್ದಾನೆ.
ಈ ವ್ಯಕ್ತಿಯು ಕೆಲ ದಿನಗಳ ಹಿಂದಷ್ಟೇ ಹೊಸ ಕೆಲಸವೊಂದಕ್ಕೆ ಸೇರಿಕೊಂಡಿದ್ದ. ಈ ವಿಚಾರವಾಗಿ ಆತನ ಅತ್ತೆ – ಮಾವ ಖಾಸಗಿ ಸಂಭಾಷಣೆ ನಡೆಸಲು ಮುಂದಾಗಿದ್ದಾರೆ.
ನನ್ನ ಅತ್ತೆ ಮಾವ ನನ್ನನ್ನ ಅತಿಥಿ ಗೃಹಕ್ಕೆ ಆಹ್ವಾನಿಸಿದ್ದರು. ನನ್ನ ಭಾವಿ ಮಾವ ನನ್ನ ಫೋನ್ ಹಾಗೂ ಕೀಗಳನ್ನ ಡೈನಿಂಗ್ ಟೇಬಲ್ನಲ್ಲೇ ಇಡುವಂತೆ ಹೇಳಿದ್ರು. ಇದಾದ ಬಳಿಕ ನನ್ನ ಬಳಿ ಹೊಸ ಕೆಲಸದ ಬಗ್ಗೆ ಮಾಹಿತಿ ಕೇಳಲು ಶುರು ಮಾಡಿದ್ರು.
ಅವರಿಗೆ ನನ್ನ ವೇತನ ಎಷ್ಟು ಅನ್ನೋದು ತಿಳಿದಿರಲಿಲ್ಲ. ಹೀಗಾಗಿ ಅವರು ನನ್ನ ಸಂಬಳವನ್ನ ತಿಳಿದುಕೊಳ್ಳುವ ಪ್ರಯತ್ನದಲ್ಲಿದ್ದರು. ಆದರೆ ನಾನು ಸೌಜನ್ಯದಿಂದಲೇ ಅವರ ಪ್ರಶ್ನೆಯನ್ನ ತಳ್ಳಿಹಾಕಿದೆ. ಅಲ್ಲದೇ ಇದು ನಿಮಗೆ ಸಂಬಂಧಿಸಿದ್ದಲ್ಲ ಎಂದೂ ನಾನು ಅವರಿಗೆ ಹೇಳಿದೆ.
ಈ ವೇಳೆ ನನ್ನ ಭಾವಿ ಮಾವ ನಿನಗೆ ನಾವು ನಮ್ಮ ಮಗಳನ್ನ ಕೊಡುತ್ತಿದ್ದೇವೆ. ಹೀಗಾಗಿ ನಿನ್ನ ಸಂಬಳದ ಬಗ್ಗೆ ತಿಳಿದುಕೊಳ್ಳುವ ಎಲ್ಲಾ ಅಧಿಕಾರ ನನಗಿದೆ. ನಮ್ಮ ಪುತ್ರಿಯ ಭವಿಷ್ಯ ಎಷ್ಟು ಸುರಕ್ಷಿತವಾಗಿದೆ ಅನ್ನೋದಕ್ಕೆ ನಮಗೂ ಗ್ಯಾರಂಟಿ ಬೇಕು ಎಂದು ಹೇಳಿದ್ರು. ನಿಮ್ಮ ಮಗಳನ್ನ ಚೆನ್ನಾಗಿ ನೋಡಿಕೊಳ್ಳೋದು ನನ್ನ ಜವಾಬ್ದಾರಿ ಎಂದು ನಾನು ಹೇಳಿದೆ. ಹಣವೇ ಸುರಕ್ಷಿತ ಜೀವನಕ್ಕೆ ಮಾರ್ಗವಲ್ಲ. ಪ್ರೀತಿ – ಕಾಳಜಿ ಕೂಡ ಹೌದು ಎಂದು ಅವರಿಗೆ ಹೇಳಿದೆ.
ಆದರೆ ಈ ಮಾತಿಗೆ ನನ್ನ ಭಾವಿ ಅತ್ತೆ ಕೂಡ ಒಪ್ಪಿಗೆ ನೀಡಲಿಲ್ಲ. ಸಂಬಳದ ಮೌಲ್ಯ ಹೇಳು ಎಂದು ಒತ್ತಾಯಿಸುತ್ತಲೇ ಇದ್ದರು. ನಾನು ಒಳ್ಳೆಯ ಸಂಬಳ ಪಡೆಯುತ್ತಿದ್ದೇನೆ ಎಂದಷ್ಟೇ ಹೇಳಿ ರೂಮಿನಿಂದ ಹೊರ ಬರಲು ಯತ್ನಿಸುತ್ತಿದ್ದಂತೆಯೇ ನನ್ನನ್ನ ಅವರು ಕೂಡಿ ಹಾಕಿದ್ರು ಎಂದು ವ್ಯಕ್ತಿ ಆರೋಪಿಸಿದ್ದಾನೆ.
ಸಾಕಷ್ಟು ವಾದ – ವಿವಾದದ ಬಳಿಕ ರೂಮಿನ ಬಾಗಿಲು ತೆರೆದ ಅವರು ಮಗಳ ಬಳಿ ಹೋಗಿ ಭಾವಿ ಅಳಿಯನಿಂದ ನಮಗೆ ಬೇಸರವಾಗಿದೆ ಎಂದು ಕಣ್ಣೀರಾಕಿದ್ದಾರೆ. ಈಗ ಆಕೆ ನನ್ನ ತಂದೆ – ತಾಯಿ ಬಳಿ ಕ್ಷಮೆಯಾಚಿಸಿ ಎಂದು ಒತ್ತಾಯಿಸುತ್ತಿದ್ದಾಳೆ. ಆದರೆ ನಾನು ಕ್ಷಮೆಯಾಚಿಸಿಲ್ಲ. ಇದರಿಂದ ನಮ್ಮ ಸಂಬಂಧ ಸಂಪೂರ್ಣ ಹಾಳಾಗಬಹುದು ಎಂಬ ಅರಿವು ನನಗಿದೆ ಎಂದು ರೆಡಿಟ್ನಲ್ಲಿ ಹೇಳಿಕೊಂಡಿದ್ದಾನೆ.
ವ್ಯಕ್ತಿಯ ಕಷ್ಟವನ್ನ ಆಲಿಸಿದ ನೆಟ್ಟಿಗರು ಈ ಸಂಬಂಧವನ್ನ ಮುಂದುವರಿಸುವ ಮುನ್ನ ನೂರು ಬಾರಿ ಯೋಚಿಸೋದು ಒಳ್ಳೆಯದು ಅಂತಾ ಅವರಿಗೆ ಸಲಹೆ ನೀಡ್ತಿದ್ದಾರೆ.