ನೀರಿನಲ್ಲಿ ಮುಳುಗುತ್ತಿದ್ದ ವ್ಯಕ್ತಿಯನ್ನು ರಕ್ಷಿಸಿದ ವಿಡಿಯೋವೊಂದು ಇಂಟರ್ನೆಟ್ನಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಸಮುದ್ರದ ಕಡೆಗೆ ಓಡಿ ಹೋಗಿ ಬಳಿಕ ಈಜಲು ಆರಂಭಿಸಿದ್ದಾರೆ. ನೋಡ ನೋಡುತ್ತಿದ್ದಂತೆಯೇ ಸಮುದ್ರದಲ್ಲಿ ಮುಳುಗುತ್ತಿದವನನ್ನು ಸಮೀಪಿಸಿದ ವ್ಯಕ್ತಿಯು ಅವನನ್ನು ಹಿಡಿದು ರಕ್ಷಿಸುತ್ತಾನೆ. ಕಡಲ ತೀರಕ್ಕೆ ವ್ಯಕ್ತಿಯನ್ನು ಎಳೆದುಕೊಂಡು ಬರುತ್ತಿರೋದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಇದೀಗ ವೈರಲ್ ಆಗಿರುವ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಲಾಗಿದೆ. ಯಾವುದೇ ಹಿಂಜರಿಕೆ ಇಲ್ಲದೇ ಮುಳುಗುತ್ತಿದ್ದ ವ್ಯಕ್ತಿಯನ್ನು ಕಾಪಾಡಿದ ಹಿರೋ ಎಂದು ಈ ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋ ಸಾಕಷ್ಟು ವೀವ್ಸ್ ಹಾಗೂ ಲೈಕ್ಸ್ ಸಂಪಾದಿಸಿದೆ.
ಆದರೆ ಕೆಲವರು ಈ ವಿಡಿಯೋ ಸತ್ಯಾಸತ್ಯತೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಕ್ಯಾಮರಾಮನ್ ಈ ವಿಡಿಯೋ ರೆಕಾರ್ಡ್ ಮಾಡಲು ಮೊದಲೇ ಸಿದ್ಧರಾಗಿ ಇದ್ದಂತೆ ಭಾಸವಾಗ್ತಿದೆ. ಒಂದು ವೇಳೆ ಈ ದೃಶ್ಯ ಸತ್ಯವೇ ಆಗಿದ್ದರೆ ನಿಜಕ್ಕೂ ಒಳ್ಳೆಯ ಕೆಲಸ. ಆದರೆ ನೀರಿನಲ್ಲಿ ಮುಳುಗಿ ಎದ್ದು ಬಂದ ವ್ಯಕ್ತಿ ಕೂಡಲೇ ಸುಧಾರಿಸಿಕೊಂಡಿದ್ದನ್ನು ನೋಡಿದರೆ ಅನುಮಾನ ವ್ಯಕ್ತವಾಗುತ್ತೆ ಎಂದು ಅಭಿಪ್ರಾಯ ಹೊರ ಹಾಕಿದ್ದಾರೆ.
ಕೆಲವು ಇತರ ಬಳಕೆದಾರರು ಘಟನೆಯ ಬಗ್ಗೆ ಸಹಾನುಭೂತಿ ಹೊಂದಿದ್ದು ರಕ್ಷಣೆಗೊಳಗಾದವನು ಅದೃಷ್ಟಶಾಲಿಯಾಗಿದ್ದಾನೆ ಎಂದು ಹೇಳಿದ್ದಾರೆ. ವ್ಯಕ್ತಿಯನ್ನು ಉಳಿಸಲು ತೆಗೆದುಕೊಂಡ ಕ್ರಮಕ್ಕೆ ಆತನೇ ನಿಜವಾದ ನಾಯಕ ಎಂದು ಹೇಳಿದ್ದಾರೆ.
ಇನ್ನು ಇದೇ ವೇಳೆ ಕಳೆದ ವರ್ಷದ ಮತ್ತೊಂದು ವೀಡಿಯೊ ಸಹ ಆನ್ಲೈನ್ನಲ್ಲಿ ಹರಿದಾಡುತ್ತಿದೆ. ಇದರಲ್ಲಿ ವ್ಯಕ್ತಿಯೊಬ್ಬರು ಮುಳುಗುತ್ತಿದ್ದ ಇಬ್ಬರು ಮಕ್ಕಳನ್ನು ರಕ್ಷಿಸಿದ್ದಾರೆ. ಒಮಾನ್ನಿಂದ ಬಂದಿರುವ ವೀಡಿಯೊ ಇದಾಗಿದ್ದು ಪ್ರವಾಹದಿಂದ ಇಬ್ಬರು ಬಾಲಕರ ಜೀವವನ್ನು ಉಳಿಸಲು ವ್ಯಕ್ತಿಯೊಬ್ಬ ತನ್ನ ಪ್ರಾಣವನ್ನು ಹೇಗೆ ಪಣಕ್ಕಿಟ್ಟಿದ್ದಾನೆ ಎಂಬುದನ್ನು ಇದು ತೋರಿಸಿದೆ. ಆ ವ್ಯಕ್ತಿಯನ್ನು ನಂತರ ಅಲಿ ಬಿನ್ ನಾಸರ್ ಅಲ್-ವಾರ್ದಿ ಎಂಬ ಫೋಟೋಗ್ರಾಫರ್ ಎಂದು ಗುರುತಿಸಲಾಯಿತು. ಈ ಕ್ಲಿಪ್ ಅನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಲಾಗಿದ್ದು ಅಲ್ಲಿ ಆ ವ್ಯಕ್ತಿಗೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ.