
ಹೊಸಕೋಟೆಯಲ್ಲಿ ನಡೆದಿದೆ ಎನ್ನಲಾದ ಅಮಾನವೀಯ ಘಟನೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಯಸ್ಸಾದ ವ್ಯಕ್ತಿಯೊಬ್ಬರನ್ನು ಮನೆಯಲ್ಲಿ ಅತ್ಯಂತ ಕೆಟ್ಟ ರೀತಿಯಲ್ಲಿ ನಡೆಸಿಕೊಂಡಿದ್ದು, ಈ ಘಟನೆಯ ವಿಡಿಯೋ ವೈರಲ್ ಆದ ಬಳಿಕ, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ವಯಸ್ಸಾದ ವ್ಯಕ್ತಿಯನ್ನು ಮನೆಯಲ್ಲಿ ಪೇಟ ತೊಡಿಸಿ, ಹಾರ ಹಾಕಿ ಸನ್ಮಾನ ಮಾಡುವ ನಾಟಕವಾಡಲಾಗಿದೆ. ಬಳಿಕ ಪುಟ್ಟ ಮಗು, ಮಹಿಳೆಯರ ಮುಂದೆಯೇ ಇಬ್ಬರು ಯುವಕರು ಕೆನ್ನೆಗೆ ಬಾರಿಸಿದ್ದಾರೆ. ಅವಮಾನ ಮಾಡುತ್ತ, ಚುಚ್ಚು ಮಾತುಗಳನ್ನಾಡಿ, ಕಾಲಿನಿಂದ ಒದ್ದು ಹಿಂಸಿಸಿದ್ದಾರೆ. ಮನುಷ್ಯತ್ವವನ್ನೂ ಮರೆತು ಹಲ್ಲೆ ನಡೆಸಿದ್ದಲ್ಲದೇ ಬಾಯಿಗೆ ಬಂದಂತೆ ಮಾತುಗಳನ್ನಾಡಿ ನಕ್ಕಿದ್ದಾರೆ. ವ್ಯಕ್ತಿಯ ವಯಸ್ಸಿಗೂ ಗೌರವ ಕೊಡದೇ ಇಬ್ಬರು ಯುವಕರು ಮನಬಂದಂತೆ ಹಲ್ಲೆ ನಡೆಸಿ ಕ್ರೂರವಾಗಿ ವರ್ತಿಸಿದ್ದಾರೆ.
ವ್ಯಕ್ತಿ ಏನಾದರೂ ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ದೂರು ನೀಡಬೇಕಿತ್ತು. ಅದನ್ನು ಬಿಟ್ಟು ಮನೆಯಲ್ಲಿ ವ್ಯಂಗ್ಯದ ರೀತಿಯಲ್ಲಿ ಸನ್ಮಾನ ಮಾಡುವ ನಾಟಕವಾಡಿ ಮನಬಂದಂತೆ ಹೊಡೆದು, ವಿಡಿಯೋ ಮಾಡಿಕೊಂಡು ಹುಚ್ಚಾಟ ಮೆರೆದಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಭಾರಿ ವೈರಲ್ ಆಗಿದ್ದು, ಅವಮಾನ ಮಾಡಿ, ಹಲ್ಲೆ ನಡೆಸಿರುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.