ಸಹಾನುಭೂತಿ ಮತ್ತು ಮೆಚ್ಚುಗೆಯ ಮೂಲಕ ಜನರನ್ನು ಒಟ್ಟುಗೂಡಿಸುವ ಹಲವು ವಿಡಿಯೋಗಳು ಇಂಟರ್ನೆಟ್ ನಲ್ಲಿ ಕಾಣಸಿಗುತ್ತವೆ. ವ್ಯಕ್ತಿಯ ಸಹಾನುಭೂತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವ ವಿಡಿಯೊವೊಂದು ಇತ್ತೀಚಿಗೆ ವೈರಲ್ ಆಗಿದ್ದು ನೆಟ್ಟಿಗರು ಆತನನ್ನು ನಿಜವಾದ ಹೀರೋ ಎಂದಿದ್ದಾರೆ.
ಸಂಕಟದಲ್ಲಿರುವ ಗೂಬೆಯನ್ನು ಬಿಡಿಸಲು ವ್ಯಕ್ತಿಯ ಧೈರ್ಯಶಾಲಿ ಪ್ರಯತ್ನಗಳು ವಿಡಿಯೋದಲ್ಲಿ ಸೆರೆಯಾಗಿವೆ. ಗೂಬೆಯ ರೆಕ್ಕೆ ದಾರವೊಂದಕ್ಕೆ ಸಿಕ್ಕಿಹಾಕಿಕೊಂಡಿದ್ದು, ಮರದ ಕೊಂಬೆಯಿಂದ ಅಪಾಯಕಾರಿಯಾಗಿ ನೇತಾಡುತ್ತಿರುತ್ತದೆ. ಗೂಬೆ ಸೇತಾಡುತ್ತಿರುವ ಮರದ ಕೆಳಗೆ ನೀರು ಹರಿಯುತ್ತಿರುತ್ತದೆ. ಇಂತಹ ಸಂಕಷ್ಟದ ಸ್ಥಿತಿಯಲ್ಲಿದ್ದ ಗೂಬೆಯನ್ನ ರಕ್ಷಿಸಲು ವ್ಯಕ್ತಿ ನೀರಿನೊಳಗೆ ಇಳಿದು ಬಲೆಯಂತಹ ವಸ್ತುವನ್ನು ಬಳಸಿ ಗೂಬೆಯನ್ನ ರಕ್ಷಿಸಿ ದಡಕ್ಕೆ ತಂದು ಬಿಡುತ್ತಾರೆ. ಗೂಬೆಯನ್ನು ಅತ್ಯಂತ ಎಚ್ಚರಿಕೆಯಿಂದ ಮತ್ತು ಕಾಳಜಿಯಿಂದ ರಕ್ಷಿಸಿದ ಆ ವ್ಯಕ್ತಿಯ ತಾಳ್ಮೆ ಮತ್ತು ಪರಿಣಿತಿಯನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.