ಬರೇಲಿ: ಉತ್ತರ ಪ್ರದೇಶದಲ್ಲಿ 16 ವರ್ಷದ ಬಾಲಕಿಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ್ದ ಯುವಕ ಆಕೆ ಗರ್ಭಿಣಿ ಎಂದು ತಿಳಿದಾಗ ಹತ್ಯೆಗೈದಿದ್ದಾನೆ.
ನಾಪತ್ತೆಯಾಗಿದ್ದ ಹುಡುಗಿ ಸೆಪ್ಟೆಂಬರ್ 20 ರಂದು ಬರೇಲಿಯ ಡಿಯೋರಾನಿಯಾ ಪ್ರದೇಶದ ಹಳ್ಳಿಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಮರಣೋತ್ತರ ಪರೀಕ್ಷೆಯಲ್ಲಿ ಬಾಲಕಿ ನಾಲ್ಕು ತಿಂಗಳ ಗರ್ಭಿಣಿ ಎಂದು ತಿಳಿದುಬಂದಿದೆ.
ಬಾಲಕಿ ಶವ ಪತ್ತೆಯಾದ ಕೂಡಲೇ ಭಾಗವತ್ ಶರಣ್ ಎಂದು ಗುರುತಿಸಲಾದ ಸ್ಥಳೀಯ ಯುವಕ ನಾಪತ್ತೆಯಾಗಲೆತ್ನಿಸಿದ್ದು ಆತನನ್ನು ಬಂಧಿಸಿ ತನಿಖೆ ಮುಂದುವರೆಸಲಾಗಿದೆ.
ಬರೇಲಿಯಿಂದ ಪಲಾಯನ ಮಾಡಲು ಭಾಗವತ್ ಪ್ರಯತ್ನಿಸುತ್ತಿದ್ದನೆಂದು ಪೋಲಿಸರಿಗೆ ತಿಳಿದಿದ್ದು, ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆ ನಡೆಸಿದಾಗ, ಆರೋಪಿ 16 ವರ್ಷದ ಬಾಲಕಿಯನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಆಕೆ ತನ್ನ ಹೆಸರನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದರಿಂದ ಕೊಲೆ ಮಾಡಿರುವುದಾಗಿ ಹೇಳಿದ್ದಾನೆ.
20 ವರ್ಷದ ಆರೋಪಿ ಆರು ತಿಂಗಳಿನಿಂದ ಹುಡುಗಿಯ ಜೊತೆ ಸಂಬಂಧ ಹೊಂದಿದ್ದ. ಬಾಲಕಿ ಗರ್ಭಿಣಿಯಾಗಿದ್ದಾಳೆ ಎಂದು ತಿಳಿದಾಗ, ಗರ್ಭಪಾತ ಮಾಡಿಸಲು ಆಕೆಗೆ ಔಷಧಿಗಳನ್ನು ನೀಡಿದ್ದ. ಆದರೆ, ಪ್ರಯತ್ನ ವಿಫಲವಾಗಿತ್ತು. ಹುಡುಗಿ ಗರ್ಭಿಯಾದ ಬಗ್ಗೆ ಆರೋಪಿ ತಂದೆಗೆ ತಿಳಿಸುವುದಾಗಿ ಬೆದರಿಕೆ ಹಾಕಿದ್ದಾಳೆ. ಇದರಿಂದ ಹೆದರಿದ ಆರೋಪಿ, ಕೊಲೆ ಮಾಡಲು ಯೋಜನೆ ರೂಪಿಸಿದ್ದಾನೆ. ಬಾಲಕಿಯನ್ನು ಏಕಾಂತ ಸ್ಥಳಕ್ಕೆ ಕರೆದೊಯ್ದು ಹಗ್ಗದಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ವಿವಿಧ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ಕ್ರಮಕೈಗೊಳ್ಳಲಾಗಿದೆ ಎಂದು ಬರೇಲಿ ಎಸ್‌ಎಸ್‌ಪಿ ರೋಹಿತ್ ಸಿಂಗ್ ಸಜ್ವಾನ್ ಹೇಳಿದ್ದಾರೆ.