ರಾಷ್ಟ್ರ ರಾಜಧಾನಿ ನವ ದೆಹಲಿಯಲ್ಲಿರುವ ಪ್ರತಿಷ್ಠಿತ ಲೀಲಾ ಪ್ಯಾಲೇಸ್ ಹೋಟೆಲ್ ಗೆ ವ್ಯಕ್ತಿಯೊಬ್ಬ ಬರೋಬ್ಬರಿ 23 ಲಕ್ಷ ರೂಪಾಯಿಗಳಿಗೆ ಪಂಗನಾಮ ಹಾಕಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲ, ಹೋಟೆಲ್ ಕೋಣೆಯಲ್ಲಿದ್ದ ಬೆಲೆ ಬಾಳುವ ವಸ್ತುಗಳನ್ನು ಸಹ ಆತ ಕದ್ದುಕೊಂಡು ಹೋಗಿದ್ದಾನೆ.
ಪ್ರಕರಣದ ವಿವರ: ಯು ಎಇ ಸುಲ್ತಾನ ಶೇಖ್ ಫಲ್ಹಾ ಬಿನ್ ಜಾಯೇದ್ ಅಲ್ ನಹ್ಯಾನ್ ಅವರ ಕಚೇರಿಯ ಅಧಿಕಾರಿ ಎಂದು ಹೇಳಿಕೊಂಡು ಮೊಹಮ್ಮದ್ ಷರೀಫ್ ಎಂಬ ಈ ವ್ಯಕ್ತಿ ಆಗಸ್ಟ್ 1 ರಂದು ಕೋಣೆ ಪಡೆದುಕೊಂಡಿದ್ದ.
427ನೇ ನಂಬರಿನ ಕೊಠಡಿಯಲ್ಲಿ ಈತ ನವೆಂಬರ್ 20ರವರೆಗೆ ತಂಗಿದ್ದು, ಹೋಟೆಲ್ ನ ಎಲ್ಲಾ ಐಷಾರಾಮಿ ಸವಲತ್ತುಗಳನ್ನು ಬಳಸಿಕೊಂಡಿದ್ದಾನೆ. ಬಳಿಕ ರಾತ್ರೋರಾತ್ರಿ ಪರಾರಿಯಾಗಿದ್ದಾನೆ. ಈತನ ಒಟ್ಟು ಬಿಲ್ 35 ಲಕ್ಷ ರೂಪಾಯಿಗಳಾಗಿದ್ದು, ಕೇವಲ 11.50 ಲಕ್ಷ ರೂಪಾಯಿಗಳನ್ನು ಮಾತ್ರ ಪಾವತಿಸಿದ್ದ ಎನ್ನಲಾಗಿದೆ.
ಇದೀಗ ಲೀಲಾ ಪ್ಯಾಲೇಸ್ ಹೋಟೆಲ್ ಮ್ಯಾನೇಜರ್ ವಂಚನೆ ಕುರಿತಂತೆ ನವದೆಹಲಿ ಪೊಲೀಸರಿಗೆ ದೂರು ನೀಡಿದ್ದು, ಮೊಹಮ್ಮದ್ ಷರೀಫ್ ಬಂಧನಕ್ಕಾಗಿ ಕಾರ್ಯಾಚರಣೆ ನಡೆಯುತ್ತಿದೆ.